ಮಹಿಳೆಯರ ಟಿ-20 ರ‍್ಯಾಂಕಿಂಗ್ | ಶೆಫಾಲಿ ವರ್ಮಾಗೆ ಭಡ್ತಿ, ದೀಪ್ತಿ ಶರ್ಮಾ ನಂ.1 ಸ್ಥಾನ ಭದ್ರ
Photo Credit : PTI
ಹೊಸದಿಲ್ಲಿ, ಡಿ.30: ಭಾರತದ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಶ್ರೀಲಂಕಾ ವಿರುದ್ಧ ಉತ್ತಮ ಪ್ರದರ್ಶನ ನೀಡುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಬಿಡುಗಡೆಯಾಗಿರುವ ಮಹಿಳೆಯರ ಟಿ-20 ಬ್ಯಾಟಿಂಗ್ ರ‍್ಯಾಂಕಿಂಗ್ ನಲ್ಲಿ ಆರನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.
ಈ ಹಿಂದೆ ಟಿ-20 ಕ್ರಿಕೆಟ್ ನ ನಂ.1 ಬ್ಯಾಟರ್ ಆಗಿದ್ದ 21ರ ವಯಸ್ಸಿನ ಶೆಫಾಲಿ ಈಗ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಟಿ-20 ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ ಪರಿಣಾಮ ನಾಲ್ಕು ಸ್ಥಾನಗಳಲ್ಲಿ ಭಡ್ತಿ ಪಡೆದಿದ್ದಾರೆ.
ಶೆಫಾಲಿ ಎರಡನೇ ಟಿ-20 ಪಂದ್ಯದಲ್ಲಿ ಕೇವಲ 34 ಎಸೆತಗಳಲ್ಲಿ ಔಟಾಗದೆ 69 ರನ್ ಗಳಿಸಿದ್ದರು. ಆನಂತರ ತಿರುವನಂತಪುರದಲ್ಲಿ ನಡೆದಿದ್ದ ಮೂರನೇ ಹಾಗೂ ನಾಲ್ಕನೇ ಪಂದ್ಯಗಳಲ್ಲಿ ಅರ್ಧಶತಕಗಳನ್ನು ಗಳಿಸಿದ್ದಾರೆ.
ಅಗ್ರ ಸರದಿಯಲ್ಲಿ ಬಿರುಸಿನ ಬ್ಯಾಟಿಂಗ್‌ನ ಮೂಲಕ ಶೆಫಾಲಿ ಭಾರತ ತಂಡಕ್ಕೆ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಇನಿಂಗ್ಸ್‌ನ ಆರಂಭದಲ್ಲೇ ಶ್ರೀಲಂಕಾದ ಬೌಲರ್ ಗಳಿಗೆ ಒತ್ತಡ ಹೇರುತ್ತಿದ್ದಾರೆ.
ಭಾರತ ತಂಡದ ಉಪ ನಾಯಕಿ ಸ್ಮತಿ ಮಂಧಾನ ಸರಣಿಯ ಆರಂಭದಲ್ಲಿ ರನ್ ಗಾಗಿ ಪರದಾಟ ನಡೆಸಿದ್ದರೂ ನಾಲ್ಕನೇ ಟಿ-20 ಪಂದ್ಯದಲ್ಲಿ 80 ರನ್ ಗಳಿಸಿದ್ದರು. ಮಂಧಾನ ಐಸಿಸಿ ರ‍್ಯಾಂಕಿಂಗ್ ನಲ್ಲಿ ತನ್ನ ಮೂರನೇ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ವೇಳೆ, ಮಧ್ಯಮ ಸರದಿಯ ಬ್ಯಾಟರ್ ಜೆಮಿಮಾ ರೊಡ್ರಿಗಸ್ ಒಂದು ಸ್ಥಾನ ಕೆಳ ಜಾರಿ 10ನೇ ರ‍್ಯಾಂಕಿಗೆ ತಲುಪಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಅನುಭವಿ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರು ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ದೀಪ್ತಿ ವಿಶ್ವದ ನಂ.1 ಟಿ-20 ಬೌಲರ್ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಭಾರತದ ಇನ್ನೋರ್ವ ವೇಗದ ಬೌಲರ್ ರೇಣುಕಾ ಸಿಂಗ್ ಠಾಕೂರ್ ಎಂಟು ಸ್ಥಾನ ಮೇಲಕ್ಕೇರಿ ಆರನೇ ಸ್ಥಾನ ಹಂಚಿಕೊಂಡಿದ್ದಾರೆ. ರೇಣುಕಾ 3ನೇ ಟಿ-20 ಪಂದ್ಯದಲ್ಲಿ 21 ರನ್‌ಗೆ 4 ವಿಕೆಟ್‌ಗಳನ್ನು ಉರುಳಿಸಿ ಭಾರತ 8 ವಿಕೆಟ್ ಗಳಿಂದ ಜಯ ಸಾಧಿಸುವಲ್ಲಿ ನೆರವಾಗಿದ್ದಾರೆ.
ಭಾರತದ ಯುವ ಎಡಗೈ ಸ್ಪಿನ್ನರ್ ಗಳು ಪರಿಣಾಮಕಾರಿ ಪ್ರದರ್ಶನ ನೀಡಿದ್ದಾರೆ. ಶ್ರೀಚರಣಿ 17 ಸ್ಥಾನಗಳಲ್ಲಿ ಭಡ್ತಿ ಪಡೆದು 52ನೇ ಸ್ಥಾನ ತಲುಪಿದರು. ವೈಷ್ಣವಿ ಶರ್ಮಾ 390 ಸ್ಥಾನಗಳಲ್ಲಿ ಭಡ್ತಿ ಪಡೆದು 124ನೇ ರ‍್ಯಾಂಕಿಗೆ ತಲುಪಿದ್ದಾರೆ.
ವೈಷ್ಣವಿಗೆ ಇದು ಮೊದಲ ಅಂತರ್‌ರಾಷ್ಟ್ರೀಯ ಸರಣಿಯಾಗಿದೆ. 2026ರಲ್ಲಿ ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ನಡೆಯಲಿರುವ 2026ರ ಮಹಿಳೆಯರ ಟಿ-20 ವಿಶ್ವಕಪ್‌ಗೆ ತಯಾರಿ ನಡೆಸುತ್ತಿರುವ ಭಾರತ ತಂಡಕ್ಕೆ ವೈಷ್ಣವಿ ಪ್ರದರ್ಶನವು ಸಕಾರಾತ್ಮಕ ಅಂಶವಾಗಿದೆ.
ಶ್ರೀಲಂಕಾದ ಆಟಗಾರ್ತಿಯರು ಸ್ವಲ್ಪ ಮಟ್ಟಿನ ಪ್ರಗತಿ ಸಾಧಿಸುತ್ತಿದ್ದು, ಆರಂಭಿಕ ಆಟಗಾರ್ತಿ ಹಸಿನಿ ಪೆರೇರ 22, 25 ಹಾಗೂ 33 ರನ್ ಗಳಿಸಿದ ನಂತರ 114 ಸ್ಥಾನಗಳಲ್ಲಿ ಮೇಲೇರಿ 71ನೇ ರ‍್ಯಾಂಕಿಗೆ ತಲುಪಿದ್ದಾರೆ.
ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಆಲ್‌ರೌಂಡರ್ ಕವಿಶಾ ದಿಲ್ಹರಿ ಮೂರು ಸ್ಥಾನ ಮೇಲಕ್ಕೇರಿ 79ನೇ ರ‍್ಯಾಂಕಿಗೆ ತಲುಪಿದ್ದಾರೆ.