185 ಮಿಲಿಯನ್ ಡಿಜಿಟಲ್ ವೀಕ್ಷಕರು: ದಾಖಲೆ ಪುಡಿಗಟ್ಟಿದ ಮಹಿಳೆಯರ ವಿಶ್ವಕಪ್ ಫೈನಲ್!
Photo Credit : PTI
ಹೊಸದಿಲ್ಲಿ, ನ.7: ಭಾರತದ ಮಹಿಳಾ ಕ್ರಿಕೆಟ್ ತಂಡವು 2025ರ ಆವೃತ್ತಿಯ ಐಸಿಸಿ ಮಹಿಳೆಯರ ವಿಶ್ವಕಪ್ ನಲ್ಲಿ ವಿಜಯಶಾಲಿಯಾಗಿ ಐತಿಹಾಸಿಕ ಸಾಧನೆ ಮಾಡಿದರೆ, ಮತ್ತೊಂದೆಡೆ ಡಿಜಿಟಲ್ ವೀಕ್ಷಕರ ಸಂಖ್ಯೆಯಲ್ಲ್ಲೂ ಹೊಸ ದಾಖಲೆ ನಿರ್ಮಾಣವಾಯಿತು.
ಜಿಯೋಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಮಾಡಲಾದ ಫೈನಲ್ ಪಂದ್ಯವು 185 ಮಿಲಿಯನ್ ವೀಕ್ಷಕರನ್ನು ಸೆಳೆಯಿತು. ಈ ಮೂಲಕ 2024ರ ಆವೃತ್ತಿಯ ಐಸಿಸಿ ಪುರುಷರ ಟಿ20 ವಿಶ್ವಕಪ್ ಫೈನಲ್‌ನ ವೀಕ್ಷಕರ ಸಂಖ್ಯೆಯನ್ನು ಸರಿಗಟ್ಟಿತು.
ಅಧಿಕೃತ ಮಾಹಿತಿಯ ಪ್ರಕಾರ ಸೆಪ್ಟಂಬರ್ 30ರಂದು ಆರಂಭವಾದ ಮಹಿಳೆಯರ ವಿಶ್ವಕಪ್ ಪಂದ್ಯಾವಳಿಯು ಒಟ್ಟು 446 ಮಿಲಿಯನ್ ವೀಕ್ಷಕರನ್ನು ತಲುಪಿದೆ. ಇದು ಹಿಂದಿನ 3 ಐಸಿಸಿ ಮಹಿಳಾ ವಿಶ್ವಕಪ್ ನ ಒಟ್ಟು ಡಿಜಿಟಲ್ ಪ್ರೇಕ್ಷಕರನ್ನು ಮೀರಿಸಿದೆ.
ಭಾರತದ ಮೊತ್ತ ಮೊದಲ ವಿಶ್ವಕಪ್ ಗೆಲುವು ಸ್ವತಃ ಇತಿಹಾಸ ಸೃಷ್ಟಿಸಿದರೂ ಡಿಜಿಟಲ್ ವೀಕ್ಷಕರ ಸಂಖ್ಯೆಯು ಕ್ರೀಡೆಯ ಹೆಚ್ಚುತ್ತಿರುವ ಜನಪ್ರಿಯತೆ ಹಾಗೂ ಭಾರತದಲ್ಲಿ ಅದರ ಅಭಿಮಾನಿಗಳ ನೆಲೆ ವಿಸ್ತಾರವಾಗುತ್ತಿರುವುದನ್ನು ಎತ್ತಿ ತೋರಿಸುತ್ತಿದೆ.
ರವಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯವು 21 ಮಿಲಿಯನ್ ಜನರನ್ನು ತಲುಪಿತ್ತು. ಹರ್ಮನ್‌ಪ್ರೀತ್ ಕೌರ್ ಬಳಗವು ಐಸಿಸಿ ಮಹಿಳೆಯರ ವಿಶ್ವಕಪ್ ಟ್ರೋಫಿಯನ್ನು ಗೆದ್ದಿರುವ ಮೊದಲ ಏಶ್ಯನ್ ತಂಡವಾಗಿದೆ.
ಕನೆಕ್ಟೆಡ್ ಟಿವಿ(ಸಿಟಿವಿ)ಯಲ್ಲಿ 92 ಮಿಲಿಯನ್ ವೀಕ್ಷಕರು ಫೈನಲ್ ಪಂದ್ಯವನ್ನು ವೀಕ್ಷಿಸಿದ್ದು, ಮತ್ತೊಂದು ಮೈಲಿಗಲ್ಲಾಗಿದೆ. ಈ ಅಂಕಿ-ಅಂಶವು 2024ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಹಾಗೂ 2023ರ ಪುರುಷರ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯಗಳ ಸಿಟಿವಿ ವೀಕ್ಷಕರ ಸಂಖ್ಯೆಯನ್ನು ಸರಿಗಟ್ಟಿತು. ಭಾರತದಲ್ಲಿ ಕ್ರೀಡಾ ವೀಕ್ಷಣೆಗೆ ಡಿಜಿಟಲ್ ಹಾಗೂ ದೊಡ್ಡ ಪರದೆಯ ಸ್ಟ್ರೀಮಿಂಗ್ ಹೇಗೆ ಮಹತ್ವದ ಪಡೆದಿದೆ ಎಂಬುದನ್ನು ಅಂಕಿ-ಅಂಶ ತೋರಿಸುತ್ತಿದೆ.