×
Ad

ಮಹಿಳೆಯರ ವಿಶ್ವಕಪ್ | ದಕ್ಷಿಣ ಆಫ್ರಿಕಾಗೆ 299ರ ಗುರಿ ನೀಡಿದ ಭಾರತ

Update: 2025-11-02 20:28 IST

Photo Credit : @BCCIWomen

ನವಿ ಮುಂಬೈ, ನ.2: ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ(87 ರನ್, 78 ಎಸೆತ, 7 ಬೌಂಡರಿ,2 ಸಿಕ್ಸರ್)ಹಾಗೂ ಆಲ್‌ರೌಂಡರ್ ದೀಪ್ತಿ ಶರ್ಮಾ(58 ರನ್, 58 ಎಸೆತ, 3 ಬೌಂಡರಿ, 1 ಸಿಕ್ಸರ್)ಅವರ ಅರ್ಧಶತಕಗಳ ಕೊಡುಗೆಯ ನೆರವಿನಿಂದ ಭಾರತದ ಮಹಿಳಾ ಕ್ರಿಕೆಟ್ ತಂಡವು ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 298 ರನ್ ಗಳಿಸಿದೆ.

ದೀಪ್ತಿ ಶರ್ಮಾ ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ರನೌಟಾದರು. ಭಾರತವು ವಿಶ್ವಕಪ್ ಫೈನಲ್‌ನಲ್ಲಿ 2ನೇ ಗರಿಷ್ಠ ಮೊತ್ತ ಗಳಿಸಿದೆ. 2022ರಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯ ತಂಡವು 5 ವಿಕೆಟ್‌ಗಳ ನಷ್ಟಕ್ಕೆ 356 ರನ್ ಗಳಿಸಿತ್ತು.

ಭಾರತವು ಏಕದಿನ ಕ್ರಿಕೆಟ್‌ನಲ್ಲಿ 3ನೇ ಬಾರಿ ವೈಯಕ್ತಿಕ ಶತಕದ ಬಲವಿಲ್ಲದೇ ಉತ್ತಮ ಮೊತ್ತ(298 ರನ್)ಕಲೆ ಹಾಕಿದೆ.

ನಿಗದಿತ ಸಮಯಕ್ಕಿಂತ ಎರಡು ಗಂಟೆ ತಡವಾಗಿ ಆರಂಭವಾದ ಫೈನಲ್ ಪಂದ್ಯದಲ್ಲಿ ಟಾಸ್ ಜಯಿಸಿದ ದಕ್ಷಿಣ ಆಫ್ರಿಕಾ ತಂಡದ ನಾಯಕಿ ಲೌರಾ ವೊಲ್ವಾರ್ಟ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಉಭಯ ತಂಡಗಳು ಆಡುವ 11 ಬಳಗದಲ್ಲಿ ಬದಲಾವಣೆ ಮಾಡಿಲ್ಲ.

ಇನಿಂಗ್ಸ್ ಆರಂಭಿಸಿದ ಶೆಫಾಲಿ ಹಾಗೂ ಸ್ಮತಿ ಮಂಧಾನ(45 ರನ್, 58 ಎಸೆತ, 8 ಬೌಂಡರಿ)ಮೊದಲ ವಿಕೆಟ್‌ಗೆ 106 ಎಸೆತಗಳಲ್ಲಿ 104 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು.

ಸ್ಮತಿ ಔಟಾದ ನಂತರ ಸೆಮಿ ಫೈನಲ್‌ನಲ್ಲಿ ಮಿಂಚಿದ್ದ ಜೆಮಿಮಾ ರೊಡ್ರಿಗಸ್(24 ರನ್, 37 ಎಸೆತ)ಹಾಗೂ ಶೆಫಾಲಿ 2ನೇ ವಿಕೆಟ್‌ಗೆ 62 ರನ್ ಸೇರಿಸಿದರು. ಆದರೆ ಶೆಫಾಲಿ ಹಾಗೂ ಜೆಮಿಮಾ ಬೆನ್ನುಬೆನ್ನಿಗೆ ಔಟಾದರು.

ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ದೀಪ್ತಿ ಶರ್ಮಾ 4ನೇ ವಿಕೆಟ್‌ಗೆ 52 ರನ್ ಸೇರಿಸಿ ತಂಡದ ಮೊತ್ತ ಹಿಗ್ಗಿಸಿದರು. ಕೌರ್ 20 ರನ್ ಗಳಿಸಿ ಮ್ಲಾಬಾಗೆ ಕ್ಲೀನ್‌ಬೌಲ್ಡಾದರು.

ದೀಪ್ತಿ ಹಾಗೂ ವಿಕೆಟ್‌ಕೀಪರ್ ರಿಚಾ ಘೋಷ್ (34 ರನ್, 24 ಎಸೆತ) 6ನೇ ವಿಕೆಟ್‌ಗೆ 47 ರನ್ ಜೊತೆಯಾಟ ನಡೆಸಿ ತಂಡವು ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾದರು.

ದಕ್ಷಿಣ ಆಫ್ರಿಕಾದ ಬೌಲಿಂಗ್ ವಿಭಾಗದಲ್ಲಿ ಅಯಬೊಂಗಾ ಖಾಕಾ(3-58)ಯಶಸ್ವಿ ಪ್ರದರ್ಶನ ನೀಡಿದರು. ಟ್ರಯಾನ್(1-46), ಮ್ಲಾಬಾ(1-47)ಹಾಗೂ ನಾಡಿನ್ ಡಿ ಕ್ಲಾರ್ಕ್(1-52)ತಲಾ ಒಂದು ವಿಕೆಟ್ ಪಡೆದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News