×
Ad

ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್ಸ್ 2025 : ವೇಗದ ನಡಿಗೆಯಲ್ಲಿ ಡನ್‌ಫೀ, ಪೆರೆಝ್‌ಗೆ ಚಿನ್ನ

Update: 2025-09-13 22:10 IST

ಇವಾನ್ ಡನ್‌ಫೀ , ಮರಿಯಾ ಪೆರೆಝ್ | PC : X.com

ಟೋಕಿಯೊ, ಸೆ. 13: ಟೋಕಿಯೊದಲ್ಲಿ ನಡೆಯುತ್ತಿರುವ 20ನೇ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್ಸ್‌ನಲ್ಲಿ, 35 ಕಿ.ಮೀ. ವೇಗದ ನಡಿಗೆಯಲ್ಲಿ ಕೆನಡದ ಇವಾನ್ ಡನ್‌ಫೀ ಮತ್ತು ಹಾಲಿ ಚಾಂಪಿಯನ್ ಸ್ಪೇನ್‌ನ ಮರಿಯಾ ಪೆರೆಝ್ ಶನಿವಾರ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

ಪುರುಷರ ವಿಭಾಗದಲ್ಲಿ, ಮಿತಿ ಮೀರಿದ ಉಷ್ಣತೆ ಮತ್ತು ಆರ್ದ್ರತೆಯನ್ನು ಮೆಟ್ಟಿ ನಿಂತು ಆಡನ್‌ಫೀ ಎರಡು ಗಂಟೆ, 28 ನಿಮಿಷ ಮತ್ತು 22 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಇದು ಅವರ ಮೊದಲ ಜಾಗತಿಕ ಪ್ರಶಸ್ತಿಯಾಗಿದೆ.

‘‘ಇದು ನನ್ನ ಕನಸು ನನಸಾದ ದಿನ. ಈ ವರ್ಷ ನಾನು 35ನೇ ವರ್ಷಕ್ಕೆ ಕಾಲಿಡುತ್ತಿದ್ದೇನೆ. ಆದರೆ, ನನ್ನ ನಿರ್ವಹಣೆ ದಿನದಿಂದ ದಿನಕ್ಕೆ ಉತ್ತಮಗೊಳ್ಳುತ್ತಾ ಸಾಗಿದೆ’’ ಎಂದು ಅವರು ಹೇಳಿದರು.

ಬ್ರೆಝಿಲ್‌ನ ಕಾಯೊ ಬಾನ್‌ಫಿಮ್ 2:28:55 ರಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದರೆ, ಜಪಾನ್‌ನ ಹಯಾಟೊ ಕಟ್ಸುಕಿ 2:29:16 ಹೊತ್ತುಗಾರಿಕೆಯೊಂದಿಗೆ ಕಂಚು ಪಡೆದರು.

ಮಹಿಳೆಯರ ವಿಭಾಗದಲ್ಲಿ ವಿಶ್ವದಾಖಲೆ ಹೊಂದಿರುವ ಮರಿಯಾ ಪೆರೆಝ್ 2 ಗಂಟೆ 39 ನಿಮಿಷ ಒಂದು ಸೆಕೆಂಡ್‌ನಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಗುರಿ ತಲುಪಿದ ಬಳಿಕ ಮಂಡಿಯೂರಿ ಕುಳಿತ ಅವರು ಬಿಕ್ಕಳಿಸಿದರು.

ಇಟಲಿಯ ಆ್ಯಂಟೊನೆಲಾ ಪಲ್ಮಿಸಾನೊ ಮೂರು ನಿಮಿಷಕ್ಕೂ ಹೆಚ್ಚಿನ ಅಂತರದ ಬಳಿಕ, ಅಂದರೆ 2:42:24ರ ಹೊತ್ತುಗಾರಿಕೆಯೊಂದಿಗೆ ಗುರಿ ತಲುಪಿ ಬೆಳ್ಳಿ ಪಡೆದರೆ, ಇಕ್ವೆಡಾರ್‌ನ ಪೌಲಾ ಮಿಲೇನಾ 2:42:44ರ ಸಮಯದೊಂದಿಗೆ ಕಂಚಿನ ಪದಕವನ್ನು ಗೆದ್ದರು.

ಶಾಖ ಮತ್ತು ತೇವಾಂಶದಿಂದ ಕೊಂಚ ನೆಮ್ಮದಿ ನೀಡುವ ಪ್ರಯತ್ನವಾಗಿ, ಎರಡೂ ಸ್ಪರ್ಧೆಗಳ ಆರಂಭಿಕ ಸಮಯವನ್ನು ಅರ್ಧ ಗಂಟೆ ಹಿಂದೂಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News