ಇನ್ನು ಮಹಿಳಾ ಅತ್ಲೀಟ್ಗಳಿಗೆ ಎಸ್ ಆರ್ ವೈ ಜೀನ್ ಪರೀಕ್ಷೆ ಕಡ್ಡಾಯ
ಹೊಸದಿಲ್ಲಿ, ಜು. 30: ವಿಶ್ವ ರ್ಯಾಂಕಿಂಗ್ ಪಂದ್ಯಾವಳಿಗಳಲ್ಲಿ ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸಲು ಬೇಕಾದ ಅರ್ಹತೆಗಳಿಗೆ ಸಂಬಂಧಿಸಿದ ನೂತನ ನಿಯಮಾವಳಿಗಳಿಗೆ ವಿಶ್ವ ಅತ್ಲೆಟಿಕ್ಸ್ ಮಂಡಳಿ ಅನುಮೋದನೆ ನೀಡಿದೆ.
ನೂತನ ನಿಯಮಾವಳಿಗಳು ಸೆಪ್ಟಂಬರ್ ಒಂದರಿಂದ ಜಾರಿಗೆ ಬರಲಿವೆ. ಟೋಕಿಯೊದಲ್ಲಿ ಸೆಪ್ಟಂಬರ್ 13ರಂದು ಆರಂಭಗೊಳ್ಳುವ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ ಗೆ ಇವುಗಳು ಅನ್ವಯಿಸುತ್ತವೆ.
ನೂತನ ನಿಯಮಾವಳಿಯ ಪ್ರಕಾರ, ವಿಶ್ವ ಚಾಂಪಿಯನ್ ಶಿಪ್ ಗಳಲ್ಲಿ ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸಲು ಬಯಸುವ ಎಲ್ಲಾ ಅತ್ಲೀಟ್ ಗಳು ಜೀವಮಾನದಲ್ಲಿ ಒಮ್ಮೆ ಎಸ್ ಆರ್ ವೈ ಜೀನ್ ಪರೀಕ್ಷೆಗೆ ಒಳಪಡಬೇಕಾಗುತ್ತದೆ.
ಇದು ಜೈವಿಕ ಲಿಂಗವನ್ನು ನಿರ್ಧರಿಸುವ ವಿಶ್ವಾಸಾರ್ಹ ಪರೀಕ್ಷೆಯಾಗಿದೆ. ಇದನ್ನು ಕೆನ್ನೆಯ ರಸ ಅಥವಾ ರಕ್ತಪರೀಕ್ಷೆ- ಇದರಲ್ಲಿ ಯಾವುದು ಹೆಚ್ಚು ಅನುಕೂಲಕರವೋ ಅದರ ಮೂಲಕ ನಿರ್ಧರಿಸಲಾಗುತ್ತದೆ.
ಅತ್ಲೆಟಿಕ್ಸ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಸೆಳೆಯಲು ಇದೊಂದು ಮಹತ್ವದ ಕ್ರಮವಾಗಿದೆ ಎಂದು ವರ್ಲ್ಡ್ ಅತ್ಲೆಟಿಕ್ ಅಧ್ಯಕ್ಷ ಸೆಬಾಸ್ಟಿಯನ್ ಕೋ ಬಣ್ಣಿಸಿದ್ದಾರೆ.