×
Ad

ವಿಶ್ವ ಬಾಕ್ಸಿಂಗ್ ಫೈನಲ್ಸ್ | ಮೀನಾಕ್ಷಿ, ಪ್ರೀತಿ, ಅರುಂಧತಿ, ನೂಪುರ್‌ ಗೆ ಚಿನ್ನ

Update: 2025-11-20 21:51 IST

Photo Credit : PTI 

ಹೊಸದಿಲ್ಲಿ, ನ.20: ನಾಲ್ಕು ಚಿನ್ನದ ಪದಕಗಳನ್ನು ಗೆದ್ದಿರುವ ಭಾರತದ ಮಹಿಳಾ ಬಾಕ್ಸರ್‌ಗಳು 2025ರ ಆವೃತ್ತಿಯ ವಿಶ್ವ ಬಾಕ್ಸಿಂಗ್ ಫೈನಲ್ಸ್ ಟೂರ್ನಿಯಲ್ಲಿ ಮನಸೂರೆಗೊಂಡಿದ್ದಾರೆ. ಪುರುಷ ಬಾಕ್ಸರ್‌ಗಳು ನಾಲ್ಕು ಬೆಳ್ಳಿ ಪದಕಗಳನ್ನು ಜಯಿಸಿದ್ದು ಈ ಮೂಲಕ ಆತಿಥೇಯರು ಪ್ರಾಬಲ್ಯ ಸಾಧಿಸಿದ್ದಾರೆ.

ಶಾಹೀದ್ ವಿಜಯ ಸಿಂಗ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಗುರುವಾರ ನಡೆದ ಸ್ಪರ್ಧೆಯಲ್ಲಿ ಮೀನಾಕ್ಷಿ(48ಕೆಜಿ), ಪ್ರೀತಿ(54 ಕೆಜಿ), ಅರುಂಧತಿ ಚೌಧರಿ(70ಕೆಜಿ) ಹಾಗೂ ನೂಪುರ್(80+ಕೆಜಿ)ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಇದರೊಂದಿಗೆ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗಿಂತ ಮೊದಲು ಭಾರತವು ತನ್ನ ಪ್ರಾಬಲ್ಯ ಮೆರೆದಿದೆ.

ಪುರುಷರ ಫೈನಲ್ಸ್‌ ನಲ್ಲಿ ಜದುಮಣಿ ಸಿಂಗ್, ಪವನ್ ಬರ್ಟ್ವಾಲ್, ಅವಿನಾಶ್ ಹಾಗೂ ಅಂಕುಶ್ ಪಂಘಾಲ್ ತಲಾ ಒಂದು ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.

ಏಶ್ಯನ್ ಚಾಂಪಿಯನ್ ಫೋಝಿಲೋವಾರನ್ನು 5-0 ಅಂತರದಿಂದ ಸದೆಬಡಿದಿರುವ ಮೀನಾಕ್ಷಿ ಭಾರತಕ್ಕೆ ಮೊದಲ ಚಿನ್ನ ಗೆದ್ದುಕೊಟ್ಟರು. ಪ್ರೀತಿ ಇಟಲಿಯ ಸಿರಿನ್ ಚರಾಬಿ ಅವರನ್ನು 5-0 ಅಂತರದಿಂದ ಸೋಲಿಸಿ ಮತ್ತೊಂದು ಚಿನ್ನ ಜಮೆ ಮಾಡಿದರು.

18 ತಿಂಗಳ ನಂತರ ಸ್ಪರ್ಧಾತ್ಮಕ ಬಾಕ್ಸಿಂಗ್‌ಗೆ ಮರಳಿದ ಮಾಜಿ ಯೂತ್ ವಿಶ್ವ ಚಾಂಪಿಯನ್ ಅರುಂಧತಿ ಚೌಧರಿ ಉಜ್ಬೇಕಿಸ್ತಾನದ ಅಝಿಝಾ ರೊಕಿರೋವಾರನ್ನು 5-0 ಅಂತರದಿಂದ ಮಣಿಸಿದರು. ನೂಪುರ್ ಉಜ್ಬೇಕಿಸ್ತಾನದ ಸೊಟಿಂಬೋವಾ ಓಲ್ಟಿನಾಯ್ ಅವರನ್ನು 3-2 ಅಂತರದಿಂದ ಮಣಿಸುವ ಮೂಲಕ ಗುರುವಾರ ಭಾರತಕ್ಕೆ ನಾಲ್ಕನೇ ಚಿನ್ನ ಗೆದ್ದುಕೊಟ್ಟರು.

ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಭಾರತವು ನಾಲ್ಕು ಬೆಳ್ಳಿ ಪದಕಗಳಿಗೆ ತೃಪ್ತಿಪಟ್ಟುಕೊಂಡಿತು. 50 ಕೆಜಿ ವಿಭಾಗದಲ್ಲಿ ಜದುಮಣಿ ಸಿಂಗ್(50ಕೆಜಿ) ಉಜ್ಬೇಕಿಸ್ತಾನದ ಅಸಿಲ್‌ಬೆಕ್ ಜಲಿಲೋವ್ ಎದುರು 1-4 ಅಂತರದಿಂದ ಸೋತಿದ್ದಾರೆ. 55 ಕೆಜಿ ವಿಭಾಗದಲ್ಲಿ ಪವನ್ ಬರ್ಟ್ವಾಲ್, ಸಮಂದರ್ ಒಲಿಮೊವ್ ವಿರುದ್ಧ ಸೋತಿದ್ದಾರೆ.

ಅವಿನಾಶ್ ಜಮ್ವಾಲ್(65 ಕೆಜಿ)ಜಪಾನಿನ ಅನುಭವಿ ಬಾಕ್ಸರ್ ಶಿಯೊನ್ ನಿಶಿಯಾಮಾ ಎದುರು 1-4 ಅಂತರದಿಂದ ಶರಣಾದರು. ಅಂಕುಶ್ ಪಾಂಘಾಲ್(80ಕೆಜಿ)ಇಂಗ್ಲೆಂಡ್‌ನ ಹಾಲಿ ಚಾಂಪಿಯನ್ ಶಿಟ್ಟು ಓಲಾಡಿಮೇಜಿ ವಿರುದ್ಧ ಸೋತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News