×
Ad

ಐತಿಹಾಸಿಕ ವಿಶ್ವಕಪ್ ಗೆಲುವಿನ ಬಳಿಕ ಕೋಟ್ಯಧಿಪತಿಗಳಾದ ಭಾರತದ ಮಹಿಳಾ ಕ್ರಿಕೆಟಿಗರು

51 ಕೋಟಿ ರೂಪಾಯಿ ಬಹುಮಾನ ಘೋಷಿಸಿದ ಬಿಸಿಸಿಐ

Update: 2025-11-03 20:58 IST

PC :@ICC

ಹೊಸದಿಲ್ಲಿ, ನ.3: ಭಾರತ ಮಹಿಳಾ ಕ್ರಿಕೆಟ್ ತಂಡದ ಸದಸ್ಯರು 2025ರ ಆವೃತ್ತಿಯ ಐಸಿಸಿ ಮಹಿಳೆಯರ ವಿಶ್ವಕಪ್ ಮುಡಿಗೇರಿಸಿಕೊಳ್ಳುವ ಮೂಲಕ ರಾತ್ರೋರಾತ್ರಿ ಕೋಟ್ಯಧಿಪತಿಗಳಾಗಿದ್ದಾರೆ.

ಹರ್ಮನ್‌ಪ್ರೀತ್ ಕೌರ್ ಬಳಗವು ನವಿ ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ರವಿವಾರ ರಾತ್ರಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ 52 ರನ್‌ಗಳ ಅಂತರದಿಂದ ಜಯಶಾಲಿಯಾಗಿ ಕೊನೆಗೂ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದು ಇತಿಹಾಸ ನಿರ್ಮಿಸಿದೆ.

ಭಾರತೀಯ ಕ್ರಿಕೆಟ್ ಆಟಗಾರ್ತಿಯರು ಪಂದ್ಯಾವಳಿಯ ಬಹುಮಾನ ಮೊತ್ತ ಹಾಗೂ ಬಿಸಿಸಿಐ ಪ್ರಕಟಿಸಿರುವ ನಗದು ಬಹುಮಾನ ಮೂಲಕ 90 ಕೋಟಿ ರೂಪಾಯಿಗಳನ್ನು ಹಂಚಿಕೊಳ್ಳಲಿದ್ದಾರೆ.

ಚೊಚ್ಚಲ ವಿಶ್ವಕಪ್ ಪ್ರಶಸ್ತಿ ಗೆದ್ದಿರುವುದನ್ನು ಗುರುತಿಸಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಆಟಗಾರ್ತಿಯರು, ಕೋಚ್‌ ಗಳು, ಸಹಾಯಕ ಸಿಬ್ಬಂದಿ ಹಾಗೂ ರಾಷ್ಟ್ರೀಯ ಆಯ್ಕೆ ಸಮಿತಿ ಸಹಿತ ಸರ್ವರಿಗೂ 51 ಕೋಟಿ ರೂಪಾಯಿ ಬಹುಮಾನ ಪ್ರಕಟಿಸಿದರು.

‘‘1983ರಲ್ಲಿ ಕಪಿಲ್ ದೇವ್ ಅವರು ವಿಶ್ವಕಪ್ ಜಯಿಸುವ ಮೂಲಕ ಭಾರತೀಯ ಕ್ರಿಕೆಟ್‌ ನಲ್ಲಿ ಹೊಸ ಯುಗ ಆರಂಭವಾಗಿತ್ತು. ಇದೀಗ ಅದೇ ರೀತಿಯ ಉತ್ಸಾಹ ಹಾಗೂ ಉತ್ತೇಜನವನ್ನು ಮಹಿಳಾ ತಂಡವು ನೀಡಿದೆ. ಹರ್ಮನ್‌ಪ್ರೀತ್ ಕೌರ್ ಹಾಗೂ ಅವರ ತಂಡವು ಕೇವಲ ವಿಶ್ವಕಪ್ ಟ್ರೋಫಿಯನ್ನು ಜಯಿಸಿಲ್ಲ, ಅವರು ಎಲ್ಲ ಭಾರತೀಯರ ಹೃದಯಗಳನ್ನು ಗೆದ್ದಿದ್ದಾರೆ’’ ಎಂದು ಎಎನ್‌ಐಗೆ ಸೈಕಿಯಾ ತಿಳಿಸಿದ್ದಾರೆ.

ಭಾರತದ ಮಹಿಳಾ ತಂಡವು ವಿಶ್ವಕಪ್ ಟ್ರೋಫಿಯ ಜೊತೆಗೆ ದಾಖಲೆ 4.48 ಮಿಲಿಯನ್ ಯು.ಎಸ್. ಡಾಲರ್(39.78 ಕೋಟಿ ರೂಪಾಯಿ )ಬಹುಮಾನ ಮೊತ್ತವನ್ನು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನಿಂದ ಸ್ವೀಕರಿಸಿದೆ. ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಇದು ಗರಿಷ್ಠ ಬಹುಮಾನ ಮೊತ್ತವಾಗಿದೆ. 2025ರ ಆವೃತ್ತಿಯ ವಿಶ್ವಕಪ್‌ ನ ಒಟ್ಟು ಬಹುಮಾನ ಮೊತ್ತ 13.88 ಮಿಲಿಯನ್ ಯು.ಎಸ್. ಡಾಲರ್(123 ಕೋಟಿ ರೂಪಾಯಿ )ಆಗಿದೆ. ಇದು ನ್ಯೂಝಿಲ್ಯಾಂಡ್‌ ನಲ್ಲಿ 2022ರಲ್ಲಿ ನಡೆದಿದ್ದ ವಿಶ್ವಕಪ್‌ ನ ಒಟ್ಟು ಬಹುಮಾನ ಮೊತ್ತಕ್ಕಿಂತ 4 ಪಟ್ಟು ಹೆಚ್ಚಳವಾಗಿದೆ. 2025ರ ಮಹಿಳೆಯರ ವಿಶ್ವಕಪ್ ಬಹುಮಾನ ಮೊತ್ತವು 2023ರ ಪುರುಷರ ಕ್ರಿಕೆಟ್ ವಿಶ್ವಕಪ್ ಬಹುಮಾನ ಮೊತ್ತವನ್ನು(89 ಕೋಟಿ ರೂಪಾಯಿ )ಮೀರಿದೆ.

2022ರಲ್ಲಿ 3.5 ಮಿಲಿಯನ್ ಯು.ಎಸ್ ಡಾಲರ್(31 ಕೋಟಿ ರೂಪಾಯಿ )ಬಹುಮಾನ ನಿಗದಿಪಡಿಸಲಾಗಿದ್ದು, ಚಾಂಪಿಯನ್ ಆಗಿದ್ದ ಆಸ್ಟ್ರೇಲಿಯ ತಂಡವು ಸುಮಾರು 12 ಕೋಟಿ ರೂಪಾಯಿ ಬಹುಮಾನ ಗೆದ್ದುಕೊಂಡಿತ್ತು.

2025ರ ವಿಶ್ವಕಪ್‌ ನ ರನ್ನರ್ಸ್ ಅಪ್ ದಕ್ಷಿಣ ಆಫ್ರಿಕಾ ತಂಡವು 2.24 ಮಿಲಿಯನ್ ಯು.ಎಸ್. ಡಾಲರ್(ಸುಮಾರು 20 ಕೋಟಿ ರೂಪಾಯಿ )ಬಹುಮಾನವನ್ನು ತನ್ನದಾಗಿಸಿಕೊಂಡಿದೆ. ಸೆಮಿ ಫೈನಲ್‌ ನಲ್ಲಿ ಸೋತ ತಂಡಗಳು 1.12 ಮಿಲಿಯನ್ ಯು.ಎಸ್. ಡಾಲರ್(ಸುಮರು 10 ಕೋಟಿ ರೂಪಾಯಿ )ನಗದು ಸ್ವೀಕರಿಸಿವೆ.

ಭಾರತದ ವಿಶ್ವಕಪ್ ಹೀರೋಗಳಾದ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ಶೆಫಾಲಿ ವರ್ಮಾ ಹಾಗೂ ದೀಪ್ತಿ ಶರ್ಮಾ ಇದೀಗ ಕೇವಲ ಚಾಂಪಿಯನ್‌ಗಳು ಮಾತ್ರವಲ್ಲ, ಮಹಿಳೆಯರ ಕ್ರಿಕೆಟ್ ಅನ್ನು ಪ್ರತಿಷ್ಠೆ ಹಾಗೂ ಸಮೃದ್ದಿಯ ವೃತ್ತಿಯನ್ನಾಗಿ ಪರಿವರ್ತಿಸಿದ ಶ್ರೇಯಸ್ಸು ಪಡೆದಿದ್ದಾರೆ.

ತನ್ನ ಚೊಚ್ಚಲ ವಿಶ್ವಕಪ್ ಪ್ರಶಸ್ತಿ ಹಾಗೂ ದಾಖಲೆಯ ಬಹುಮಾನ ಮೊತ್ತದೊಂದಿಗೆ ಭಾರತೀಯ ಮಹಿಳಾ ತಂಡವು ಕೇವಲ ಒಂದು ಕಪ್ ಗೆದ್ದಿಲ್ಲ, ಮುಂದಿನ ಪೀಳಿಗೆಗೆ ವಿಜಯದ ಅರ್ಥವನ್ನು ಮರು ವ್ಯಾಖ್ಯಾನಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News