×
Ad

ವಿಶ್ವಕಪ್ ವಿಜೇತ ಭಾರತದ ಅಂಧರ ಮಹಿಳಾ ಕ್ರಿಕೆಟ್ ತಂಡಕ್ಕೆ ಬೆಂಗಳೂರಿನಲ್ಲಿ ಅದ್ದೂರಿ ಸ್ವಾಗತ

ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆಯ (ಸಿಎಬಿಐ) ಅಧ್ಯಕ್ಷ ಡಾ. ಮಹಾಂತೇಶ್ ಜಿ. ಕಿವಡಸಣ್ಣವರ ಅವರ ನೇತೃತ್ವದ ಈ ತಂಡವು, ದೇಶಕ್ಕೆ ಮರಳಿದಾಗ ವಿಮಾನ ನಿಲ್ದಾಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಈ ಐತಿಹಾಸಿಕ ಗೆಲುವು ಜಾಗತಿಕ ಅಂಧರ ಕ್ರಿಕೆಟ್ ಸಮುದಾಯದಲ್ಲಿ ಭಾರತದ ಸ್ಥಾನಮಾನವನ್ನು ಹೆಚ್ಚಿಸಿದ್ದು ಮಾತ್ರವಲ್ಲದೆ, ದೇಶಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದೆ.

Update: 2025-11-25 21:18 IST

Photo Credit : PTI 

ಬೆಂಗಳೂರು, ನ. 24 : ಶ್ರಿಲಂಕಾದ ಕೊಲಂಬೊದಲ್ಲಿ ಇತ್ತೀಚೆಗೆ ನಡೆದ ಚೊಚ್ಚಲ ಎಸ್‌ಬಿಐ ಮಹಿಳಾ ಅಂಧರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನೇಪಾಳದ ವಿರುದ್ಧ ಭರ್ಜರಿ ಜಯ ಗಳಿಸಿ ಇತಿಹಾಸ ನಿರ್ಮಿಸಿರುವ ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡವು ಸೋಮವಾರ ಮಧ್ಯಾಹ್ನ ತಾಯ್ನಾಡಿಗೆ ಮರಳಿತು.

ಚಾಂಪಿಯನ್ ತಂಡವು ಚೆನ್ನೈ ಮೂಲಕ ಬೆಂಗಳೂರಿಗೆ ಆಗಮಿಸಿತು. ಎರಡೂ ವಿಮಾನ ನಿಲ್ದಾಣಗಳಲ್ಲಿ ತಂಡಕ್ಕೆ ಅತ್ಯಂತ ಪ್ರೀತಿಯ ಹಾಗೂ ಭಾವನಾತ್ಮಕ ಸ್ವಾಗತ ದೊರೆಯಿತು. ಅಭಿಮಾನಿಗಳು, ಅಧಿಕಾರಿಗಳು ಮತ್ತು ಸಾರ್ವಜನಿಕರು ತ್ರಿವರ್ಣ ಧ್ವಜಗಳನ್ನು ಹಿಡಿದು, ಜಯಘೋಷಗಳನ್ನು ಕೂಗುತ್ತಾ ಚಾಂಪಿಯನ್ನರನ್ನು ಬರಮಾಡಿಕೊಂಡರು. ಚೆನ್ನೈನಲ್ಲಿ ದೊರೆತ ಉತ್ಸಾಹಭರಿತ ಸ್ವಾಗತವು ಆಟಗಾರರ ದೃಢ ಸಂಕಲ್ಪ ಮತ್ತು ಕ್ರೀಡಾ ಮನೋಭಾವಕ್ಕೆ ಸಂದ ಗೌರವವಾಗಿತ್ತು. ಅಲ್ಲಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದಾಗ ಸಂಭ್ರಮ ಮತ್ತಷ್ಟು ಜೋರಾಯಿತು.

ಬೆಂಗಳೂರಿಗೆ ಆಗಮಿಸಿದ ಕೂಡಲೇ, ಕರ್ನಾಟಕ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಆಟಗಾರ್ತಿಯರನ್ನು ಅತ್ಯಂತ ಸಂತೋಷದಿಂದ ಬರಮಾಡಿಕೊಂಡಿತು. ಇದು ಕ್ರೀಡಾ ಕ್ಷೇತ್ರದಲ್ಲಿ ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ರಾಜ್ಯ ಸರಕಾರದ ಬದ್ಧತೆಯನ್ನು ಎತ್ತಿ ತೋರಿಸಿತು. ಸರಕಾರದ ಈ ಆತ್ಮೀಯ ಸ್ವಾಗತವು ತಂಡದ ಸಾಧನೆಯನ್ನು ಗುರುತಿಸುವ ಮತ್ತು ಭಾರತದಲ್ಲಿ ಅಂಧರ ಕ್ರಿಕೆಟ್ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ.

ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭ್ರಮದ ವಾತಾವರಣವಿತ್ತು. ಇಂಡಿಗೋ ಏರ್‌ಲೈನ್ಸ್ ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿ ಆಟಗಾರ್ತಿಯರನ್ನು ವಿಶೇಷವಾಗಿ ಸನ್ಮಾನಿಸಿದರು. ಹೂಗುಚ್ಛಗಳನ್ನು ನೀಡಿ, ಚಪ್ಪಾಳೆ ತಟ್ಟುವ ಮೂಲಕ ವಿಶ್ವ ಚಾಂಪಿಯನ್ನರನ್ನು ಸ್ವಾಗತಿಸಲಾಯಿತು.

►ಆಟಗಾರ್ತಿಯರಿಗೆ ನಗದು ಬಹುಮಾನ ಘೋಷಣೆ:

ಈ ಐತಿಹಾಸಿಕ ಗೆಲುವಿನ ಸಂಭ್ರಮವನ್ನು ಇಮ್ಮಡಿಗೊಳಿಸುವಂತೆ ಆಟಗಾರ್ತಿಯರಿಗೆ ಅರ್ಹ ನಗದು ಬಹುಮಾನಗಳು ಲಭಿಸಿದವು. ದಿಲ್ಲಿ ಎನ್‌ಸಿಆರ್ ಮೂಲದ ಚಿಂಟೆಲ್ಸ್ ಗ್ರೂಪ್ ಪ್ರತಿಯೊಬ್ಬ ಆಟಗಾರ್ತಿಯರಿಗೆ ತಲಾ 1,00,000 ರೂಪಾಯಿ ಹಾಗೂ ಲಂಡನ್ ಮೂಲದ ಟೆಕ್ ಕಂಪನಿ ಚಿಪ್‌ಲಾಜಿಕ್ ತಲಾ 25,000 ರೂಪಾಯಿ ಬಹುಮಾನವನ್ನು ನೀಡಿದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News