ಕುಸ್ತಿಪಟು ನೇಹಾಗೆ 2 ವರ್ಷ ನಿಷೇಧ
Photo | ndtv
ಹೊಸದಿಲ್ಲಿ, ಆ. 25: ಇತ್ತೀಚೆಗೆ ನಡೆದ ಅಂಡರ್-20 ವಿಶ್ವ ಚಾಂಪಿಯನ್‌ಶಿಪ್ಸ್‌ನಲ್ಲಿ ಅಧಿಕ ತೂಕ ಹೊಂದಿದ ಕಾರಣಕ್ಕಾಗಿ ಅನರ್ಹಗೊಂಡಿರುವ ಮಹಿಳಾ ಕುಸ್ತಿಪಟು ನೇಹಾ ಸಂಗವಾನ್ ರನ್ನು ಸೋಮವಾರ ಸೀನಿಯರ್ ವಿಶ್ವ ಚಾಂಪಿಯನ್‌ಶಿಪ್ ತಂಡದಿಂದ ಕೈಬಿಡಲಾಗಿದೆ
‘‘ನಿರಂತರ ತೂಕ ನಿರ್ವಹಣೆ ವೈಫಲ್ಯ’’ಗಳಿಗಾಗಿ ಭಾರತೀಯ ಕುಸ್ತಿ ಫೆಡರೇಶನ್ ಈ ಕ್ರಮ ತೆಗೆದುಕೊಂಡಿದೆ.
ಹರ್ಯಾಣದ ಚಾರ್ಖಿ ದಾದ್ರಿ ನಿವಾಸಿಯಾಗಿರುವ ನೇಹಾ, ಕಳೆದ ವಾರ ಬಲ್ಗೇರಿಯದ ಸಮೊಕೊವ್ ನಲ್ಲಿ ನಡೆದ ಅಂಡರ್-20 ವಿಶ್ವ ಚಾಂಪಿಯನ್ ಶಿಪ್ಸ್‌ನಲ್ಲಿ ಮಹಿಳೆಯರ 59 ಕೆಜಿ ವಿಭಾಗದಲ್ಲಿ ಸ್ಪರ್ಧಿಸಬೇಕಾಗಿತ್ತು. ಆದರೆ, ಅವರು ಸ್ಪರ್ಧೆಗೆ ಮುನ್ನ ಗರಿಷ್ಠ ಮಿತಿಗಿಂತ 600 ಗ್ರಾಮ್ ಹೆಚ್ಚು ತೂಗಿದರು.
ಆಗ ಸಂಘಟಕರು ಅವರನ್ನು ಅನರ್ಹಗೊಳಿಸಿದರು. ಪಂದ್ಯಾವಳಿಯ ಆ ತೂಕ ವಿಭಾಗದಲ್ಲಿ ಭಾರತೀಯ ಪ್ರಾತಿನಿಧ್ಯ ಇಲ್ಲದೆ ಹೋಯಿತು.
ಪಂದ್ಯಾವಳಿಯಲ್ಲಿ ಭಾರತೀಯ ಮಹಿಳಾ ತಂಡವು ಏಳು ಪದಕಗಳನ್ನು ಗೆದ್ದು ರನ್ನರ್ಸ್-ಅಪ್ ಆಯಿತು. ಮೊದಲ ಸ್ಥಾವನ್ನು ಜಪಾನ್ ಪಡೆಯಿತು. ನೇಹಾ ಚಿನ್ನ ಗೆಲ್ಲುವ ಪ್ರಬಲ ಸ್ಪರ್ಧಿಯಾಗಿದ್ದರು. ಅವರು ಚಿನ್ನ ಗೆದ್ದಿದ್ದರೆ ಭಾರತವು ತಂಡ ಚಾಂಪಿಯನ್‌ಶಿಪ್ ಗೆಲ್ಲುತ್ತಿತ್ತು.
ಭಾರತವು 140 ಅಂಕಗಳನ್ನು ಗಳಿಸಿದರೆ, ಜಪಾನ್ 165 ಅಂಕಗಳನ್ನು ಪಡೆಯಿತು. ಈಗ ಭಾರತೀಯ ಕುಸ್ತಿ ಫೆಡರೇಶನ್ ನೇಹಾರ ಸ್ಥಾನಕ್ಕೆ ಸಾರಿಕಾ ಮಲಿಕ್ ರನ್ನು ತಂದಿದೆ. ಅವರು ವಿಶ್ವ ಚಾಂಪಿಯನ್‌ಶಿಪ್ಸ್ ಟ್ರಯಲ್‌ನಲ್ಲಿ 59 ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನಿಯಾಗಿದ್ದರು.
ವಿಶ್ವ ಚಾಂಪಿಯನ್‌ಶಿಪ್ ಪಂದ್ಯಾವಳಿಯು ಕ್ರೊಯೇಶಿಯದ ಝಾಗ್ರೆಬ್‌ನಲ್ಲಿ ಸೆಪ್ಟಂಬರ್ 13ರಿಂದ 21ರವರೆಗೆ ನಡೆಯಲಿದೆ.