ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದ ಕುಸ್ತಿಪಟು ವಿನೇಶ್ ಫೋಗಟ್
Photo | PTI
ಹೊಸದಿಲ್ಲಿ, ಡಿ.12: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡು ಹೊರಬಿದ್ದ ಘಟನೆಯ ಬಳಿಕ ಕುಸ್ತಿ ಅಖಾಡದಿಂದ ನಿವೃತ್ತಿ ಘೋಷಿಸಿದ್ದ ಭಾರತದ ಹಿರಿಯ ಕುಸ್ತಿಪಟು ವಿನೇಶ್ ಫೋಗಟ್, ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದು ಮತ್ತೊಮ್ಮೆ ರಿಂಗ್‌ಗೆ ಮರಳುತ್ತಿದ್ದಾರೆ. 2028ರ ಲಾಸ್ ಏಂಜಲ್ಸ್ ಒಲಿಂಪಿಕ್ಸ್ ತಮ್ಮ ಮುಂದಿನ ಗುರಿ ಎಂದು ಅವರು ಶುಕ್ರವಾರ ಘೋಷಿಸಿದ್ದಾರೆ.
ವಿನೇಶ್(31) ಪ್ಯಾರಿಸ್ ನಲ್ಲಿ ಫೈನಲ್ ಗೆ ತಲುಪಿದ್ದರೂ ತೂಕಮಿತಿಗಿಂತ 100 ಗ್ರಾಂ ಹೆಚ್ಚಾಗಿದ್ದ ಕಾರಣ ಸ್ಪರ್ಧೆಯಿಂದ ಹೊರಬಿದ್ದಿದ್ದರು. ಒಲಿಂಪಿಕ್ಸ್ ಫೈನಲ್ ನಲ್ಲಿ ಪೈಪೋಟಿ ನಡೆಸುವ ಮೊದಲ ಭಾರತೀಯ ಮಹಿಳೆ ಎಂಬ ಐತಿಹಾಸಿಕ ಅವಕಾಶ ಅವರ ಕೈ ತಪ್ಪಿತ್ತು.
18 ತಿಂಗಳ ಮೌನದ ನಂತರ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾಗಿ ಮಾತನಾಡಿದ ವಿನೇಶ್, “ಪ್ಯಾರಿಸ್ ಬಳಿಕ ಎಲ್ಲವೂ ಮುಗಿಯಿತೇ ಎಂಬ ಪ್ರಶ್ನೆಗೆ ನನ್ನಲ್ಲೂ ಉತ್ತರ ಇರಲಿಲ್ಲ. ಒತ್ತಡ, ನಿರೀಕ್ಷೆ ಮತ್ತು ನನ್ನದೇ ಮಹತ್ವಾಕಾಂಕ್ಷೆಗಳಿಂದ ದೂರ ಸರಿದು ನಾನು ನನ್ನನ್ನೇ ಹುಡುಕಿಕೊಳ್ಳಬೇಕಾಯಿತು. ಮೌನದ ಮಧ್ಯೆ ನಾನು ಈ ಕ್ರೀಡೆಯನ್ನು ಇನ್ನೂ ಪ್ರೀತಿಸುತ್ತೇನೆ ಎಂದು ನನಗೆ ಸ್ಪಷ್ಟವಾಯಿತು,” ಎಂದು ಹೇಳಿದ್ದಾರೆ.
ಮತ್ತೆ ಸ್ಪರ್ಧಿಸುವ ನಿರ್ಧಾರಕ್ಕೆ ಕಾರಣವಾದ ಆಂತರಿಕ ಶಕ್ತಿಯನ್ನು ಉಲ್ಲೇಖಿಸಿದ ಅವರು, “ಬೆಂಕಿ ಎಂದಿಗೂ ಆರಲಿಲ್ಲ, ಅದು ಆಯಾಸದ ಅಡಿಯಲ್ಲಿ ಹೂತುಹೋಗಿತ್ತು. ಈಗ ಭಯವಿಲ್ಲದ ಹೃದಯದೊಂದಿಗೆ, ಬಗ್ಗದ ಮನೋಭಾವದೊಂದಿಗೆ ಲಾಸ್ ಏಂಜಲ್ಸ್ LA28 ಕಡೆ ಹೆಜ್ಜೆ ಹಾಕುತ್ತಿದ್ದೇನೆ,” ಎಂದು ಹೇಳಿದ್ದಾರೆ.
ತಾಯಿಯಾದ ಬಳಿಕ ಅಖಾಡಕ್ಕೆ ಮರಳುತ್ತಿರುವ ವಿರಳ ಭಾರತೀಯ ಅಥ್ಲೀಟ್ ಗಳಲ್ಲಿ ವಿನೇಶ್ ಒಬ್ಬರು. 2025ರ ಜುಲೈನಲ್ಲಿ ಗಂಡು ಮಗುವಿಗೆ ಜನ್ಮನೀಡಿದ ಅವರು, “ಈ ಪ್ರಯಾಣದಲ್ಲಿ ನಾನು ಒಬ್ಬಂಟಿಯಾಗಿಲ್ಲ. ನನ್ನ ಮಗು ನನ್ನೊಂದಿಗೆ ಇದೆ. ಲಾಸ್ ಏಂಜಲ್ಸ್ ಒಲಿಂಪಿಕ್ಸ್ ಕಡೆಗೆ ಸಾಗುವ ಹಾದಿಯಲ್ಲಿ ಅವನೇ ನನ್ನ ಚಿಕ್ಕ ಚಿಯರ್ ಲೀಡರ್,” ಎಂದು ತಿಳಿಸಿದ್ದಾರೆ.