ಮದುವೆಯಾಗುವುದಾಗಿ ನಂಬಿಸಿ ದೈಹಿಕ ಹಿಂಸೆ; ಕ್ರಿಕೆಟಿಗ ಯಶ್ ದಯಾಳ್ ವಿರುದ್ಧ ಮಹಿಳೆಯಿಂದ ಆರೋಪ
ಯಶ್ ದಯಾಳ್ (PTI)
ಲಕ್ನೋ: ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ಕ್ರಿಕೆಟಿಗ, ವೇಗದ ಬೌಲರ್ ಯಶ್ ದಯಾಳ್ ವಿರುದ್ಧ ಮಹಿಳೆಯೊಬ್ಬರು ಮದುವೆಯ ಭರವಸೆ ನೀಡಿ ಮಾನಸಿಕ, ಭಾವನಾತ್ಮಕ ಮತ್ತು ದೈಹಿಕ ಶೋಷಣೆ ನೀಡಿದ ಆರೋಪ ಮಾಡಿದ್ದಾರೆ ಎಂದು india today ವರದಿ ಮಾಡಿದೆ.
ಈ ಕುರಿತಂತೆ ಮಹಿಳೆಯು ಉತ್ತರ ಪ್ರದೇಶ ಮುಖ್ಯಮಂತ್ರಿಯವರ ಆನ್‌ಲೈನ್ ಪೋರ್ಟಲ್, ಐಜಿಆರ್‌ಎಸ್ ಮೂಲಕ ತನ್ನ ದೂರನ್ನು ಸಲ್ಲಿಸಿದ್ದು, ಸಿಎಂ ಕಚೇರಿಯು ಇಂದಿರಾಪುರಂನ ವೃತ್ತ ಅಧಿಕಾರಿ (ಸಿಒ) ಅವರಿಂದ ವರದಿಯನ್ನು ಕೋರಿದೆ. ಕ್ರಮ ಕೈಗೊಳ್ಳಲು ಗಾಝಿಯಾಬಾದ್ ಪೊಲೀಸರಿಗೆ ಜುಲೈ 21 ರ ಗಡುವು ನೀಡಲಾಗಿದೆ ಎಂದು ವರದಿಯಾಗಿದೆ.
ಆರಂಭದಲ್ಲಿ ಜೂನ್ 14 ರಂದು ಮಹಿಳೆಯು ದೂರು ದಾಖಲಿಸಿದ್ದರು. ಆದರೆ ಪೊಲೀಸರು ಯಾವುದೇ ಮಹತ್ವದ ಕ್ರಮ ಕೈಗೊಂಡಿಲ್ಲ ಅವರು ಹೇಳಿಕೊಂಡಿದ್ದಾರೆ. ತನ್ನ ಪ್ರಕರಣದಲ್ಲಿ ಯಾವುದೇ ಪ್ರಗತಿಯಿಲ್ಲದ ಕಾರಣ, ನ್ಯಾಯಕ್ಕಾಗಿ ಮುಖ್ಯಮಂತ್ರಿ ಕಚೇರಿಯಲ್ಲಿ ದೂರು ದಾಖಲಿಸಿರುವುದಾಗಿ ಅವರು ಪ್ರತಿಕ್ರಿಯಿಸಿದ್ದಾರೆ. ಕಳೆದ ಐದು ವರ್ಷಗಳಿಂದ ದಯಾಳ್ ಜೊತೆ ಸಂಬಂಧ ಹೊಂದಿರುವುದಾಗಿ ಅವರು ಆರೋಪಿಸಿದ್ದಾರೆ.
ಕಳೆದ 5 ವರ್ಷಗಳಿಂದ, ಮಹಿಳೆಯು ಯಶ್ ದಯಾಳ್ ಜೊತೆಗೆ ಸಂಬಂಧ ಹೊಂದಿದ್ದರು. ಮದುವೆಯ ಭರವಸೆ ನೀಡಿ ಅವರು, ಆಕೆಯ ಮೇಲೆ ಭಾವನಾತ್ಮಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ಶೋಷಣೆ ಮಾಡಿದ್ದಾರೆ. ಅಲ್ಲದೆ ಮಹಿಳೆಯನ್ನು ತನ್ನ ಕುಟುಂಬಕ್ಕೆ ಪರಿಚಯಿಸಿ ಗಂಡನಂತೆ ವರ್ತಿಸಿದ್ದರು. ಇದು ಆಕೆಯನ್ನು ಸಂಪೂರ್ಣವಾಗಿ ನಂಬುವಂತೆ ಮಾಡಿತ್ತು, ಎಂದು FIRನಲ್ಲಿ ಉಲ್ಲೇಖಿಸಲಾಗಿದೆ.
ತಾನು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಪೂರಕವಾಗಿ ಚಾಟ್ ದಾಖಲೆಗಳು, ತನ್ನಿಂದ ಹಣ ಪಡೆದುಕೊಂಡಿರುವ ಬಗ್ಗೆ ಸ್ಕ್ರೀನ್‌ಶಾಟ್‌ಗಳು ಇದೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಅಲ್ಲದೆ ಯಶ್ ದಯಾಳ್ ಅವರು ಇದೇ ರೀತಿ ಇತರ ಮಹಿಳೆಯರೊಂದಿಗೆ ವರ್ತಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.