ಹೃದಯ ಶಸ್ತ್ರಚಿಕಿತ್ಸೆ ನಂತರ ಸಕ್ರಿಯ ಕ್ರಿಕೆಟಿಗೆ ವಾಪಸಾದ ಭರವಸೆಯ ಕ್ರಿಕೆಟಿಗ ಯಶ್ ಧುಲ್
ಯಶ್ ಧುಲ್ | PC : NDTV
ಹೊಸದಿಲ್ಲಿ: ಈ ಹಿಂದೆ ಭಾರತದ ಅಂಡರ್-19 ತಂಡದ ನಾಯಕರಾಗಿದ್ದ 21ರ ಹರೆಯದ ಭರವಸೆಯ ಕ್ರಿಕೆಟಿಗ ಯಶ್ ಧುಲ್ ಈ ವರ್ಷದ ಆರಂಭದಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ದಿಲ್ಲಿ ಪ್ರೀಮಿಯರ್ ಲೀಗ್‌ಗಾಗಿ (ಡಿಪಿಎಲ್)ಮೈದಾನಕ್ಕೆ ಇಳಿದಿದ್ದಾರೆ.
ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿ (ಎನ್‌ಸಿಎ)ದಿನನಿತ್ಯದ ತಪಾಸಣೆಯ ಸಮಯದಲ್ಲಿ ಧುಲ್ ಅವರ ಹೃದಯದಲ್ಲಿ ರಂಧ್ರ ಇರುವುದು ಪತ್ತೆಯಾಗಿತ್ತು. ಎನ್‌ಸಿಎ ವೈದ್ಯಕೀಯ ತಂಡವು ತಕ್ಷಣವೇ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿತ್ತು. ಧುಲ್ ಅವರು ದಿಲ್ಲಿಯಲ್ಲಿ ಸರ್ಜರಿಗೆ ಒಳಗಾದರು. ಬಿಸಿಸಿಐ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ನೀಡಿ, ಅವರ ಚೇತರಿಕೆಯ ಮೇಲ್ವಿಚಾರಣೆ ನಡೆಸಿತ್ತು.
ಧುಲ್ ಅವರು ಕೆಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಶಿಬಿರದಲ್ಲಿ ಭಾಗಿಯಾಗಿದ್ದರು. ಅವರ ಸರ್ಜರಿಯು ಚೆನ್ನಾಗಿ ನಡೆದಿದ್ದು, ಅವರೀಗ ಚೇತರಿಕೆಯ ಹಾದಿಯಲ್ಲಿದ್ದಾರೆ ಎಂದು ಧುಲ್ ಅವರ ಬಾಲ್ಯದ ಕೋಚ್ ಪ್ರದೀಪ್ ಹೇಳಿದ್ದಾರೆ.
ಇದು ಗಂಭೀರವಾಗಿರಲಿಲ್ಲ. ನನ್ನ ಮಗನಿಗೆ ಹೃದಯದ ರಂಧ್ರವು ಹುಟ್ಟಿನಿಂದಲೇ ಇತ್ತು. ಎನ್‌ಸಿಎ ತಂಡವು ಚಿಕ್ಕ ಸರ್ಜರಿಯ ಸಲಹೆ ನೀಡಿತು. ದಿಲ್ಲಿಯಲ್ಲಿ ಸರ್ಜರಿ ನಡೆದಿದೆ ಎಂದು ದುಲ್ ಅವರ ತಂದೆ ವಿಜಯ್ ಹೇಳಿದ್ದಾರೆ.
ಎನ್‌ಸಿಎಯಿಂದ ಫಿಟ್ನೆಸ್ ಪ್ರಮಾಣಪತ್ರವನ್ನು ಪಡೆದ ನಂತರ ಧುಲ್ ಅವರು ಕ್ರಮೇಣ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುತ್ತಿದ್ದಾರೆ.