×
Ad

ಯಶಸ್ವಿ ಜೈಸ್ವಾಲ್ ಅರ್ಧಶತಕ | ಎರಡನೇ ಟೆಸ್ಟ್: ಭಾರತ 182/2

Update: 2025-07-02 21:42 IST

ಯಶಸ್ವಿ ಜೈಸ್ವಾಲ್ | PC : @IctHardpics

ಬರ್ಮಿಂಗ್‌ಹ್ಯಾಮ್: ಭಾರತ ಕ್ರಿಕೆಟ್ ತಂಡವು ಆತಿಥೇಯ ಇಂಗ್ಲೆಂಡ್ ವಿರುದ್ಧ ಬುಧವಾರ ಆರಂಭವಾಗಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀ ವಿರಾಮದ ವೇಳೆಗೆ 53 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 182 ರನ್ ಗಳಿಸಿದೆ.

ಟಾಸ್ ಗೆದ್ದಿರುವ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅವರು ಭಾರತ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿದರು. ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಹಾಗೂ ಕೆೆ.ಎಲ್.ರಾಹುಲ್ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು. ಮೊದಲ ಟೆಸ್ಟ್ ಪಂದ್ಯದಲ್ಲಿ ಮಿಂಚಿದ್ದ ರಾಹುಲ್ 8.4 ಓವರ್‌ಗಳಲ್ಲಿ ಕೇವಲ 2 ರನ್ ಗಳಿಸಿ ಕ್ರಿಸ್ ವೋಕ್ಸ್‌ ಗೆ ಕ್ಲೀನ್‌ ಬೌಲ್ಡಾದರು.

ಆಗ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಕರುಣ್ ನಾಯರ್ (31 ರನ್, 50 ಎಸೆತ, 5 ಬೌಂಡರಿ)ಜೈಸ್ವಾಲ್‌ ರೊಂದಿಗೆ 2ನೇ ವಿಕೆಟ್‌ಗೆ ಕೇವಲ 90 ಎಸೆತಗಳಲ್ಲಿ 80 ರನ್ ಸೇರಿಸಿ ತಂಡವನ್ನು ಆಧರಿಸಿದರು. ನಾಯರ್ ವಿಕೆಟನ್ನು ಉರುಳಿಸಿದ ಬ್ರೆಂಡನ್ ಕಾರ್ಸ್ ಈ ಜೋಡಿಯನ್ನು ಬೇರ್ಪಡಿಸಿದರು.

ಜೈಸ್ವಾಲ್ ಕೇವಲ 59 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ ತನ್ನ 11ನೇ ಅರ್ಧಶತಕ ಪೂರೈಸಿದರು. ಭಾರತ ತಂಡವು ಭೋಜನ ವಿರಾಮದ ವೇಳೆಗೆ 98 ರನ್‌ಗೆ 2 ವಿಕೆಟ್‌ಗಳನ್ನು ಕಳೆದುಕೊಂಡಿತು.

ನಾಯಕ ಶುಭಮನ್ ಗಿಲ್ ಜೊತೆ ಮೂರನೇ ವಿಕೆಟ್‌ಗೆ 131 ಎಸೆತಗಳಲ್ಲಿ 66 ರನ್ ಜೊತೆಯಾಟ ನಡೆಸಿದ ಜೈಸ್ವಾಲ್ ತನ್ನ 6ನೇ ಶತಕದತ್ತ ಮುಖ ಮಾಡಿದ್ದರು. ಭರ್ಜರಿ ಫಾರ್ಮ್‌ನಲ್ಲಿರುವ ಜೈಸ್ವಾಲ್(87 ರನ್, 107 ಎಸೆತ, 13 ಬೌಂಡರಿ)ವಿಕೆಟ್ ಉರುಳಿಸಿದ ನಾಯಕ ಸ್ಟೋಕ್ಸ್ ಶತಕಕ್ಕೆ ತಡೆಯೊಡ್ಡಿದರು.

ಟೀ ವಿರಾಮದ ವೇಳೆಗೆ ನಾಯಕ ಗಿಲ್(ಔಟಾಗದೆ 42)ಹಾಗೂ ರಿಷಭ್ ಪಂತ್(ಔಟಾಗದೆ 14)ಕ್ರೀಸ್ ಕಾಯ್ದುಕೊಂಡಿದ್ದಾರೆ. 2ನೇ ಸೆಶನ್‌ನಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡಿರುವ ಭಾರತ ತಂಡವು 84 ರನ್ ಸೇರಿಸಿದೆ. ಇಂಗ್ಲೆಂಡ್ ಬೌಲರ್‌ಗಳು ಶಿಸ್ತುಬದ್ಧ ಬೌಲಿಂಗ್ ಸಂಘಟಿಸಿ ಬೌಂಡರಿಗೆ ಕಡಿವಾಣ ಹಾಕಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News