×
Ad

ಯಶಸ್ವಿ ಜೈಸ್ವಾಲ್ ಶತಕ, ಇತಿಹಾಸ ನಿರ್ಮಿಸಿದ ಟೀಮ್ ಇಂಡಿಯಾ

Update: 2025-08-02 21:31 IST

ಯಶಸ್ವಿ ಜೈಸ್ವಾಲ್ | PC : PTI


ಲಂಡನ್, ಆ.2: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ್ದಾರೆ. ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದ 3ನೇ ದಿನವಾದ ಶನಿವಾರ ಸರಣಿಯಲ್ಲಿ ತನ್ನ 2ನೇ ಶತಕ ದಾಖಲಿಸಿದರು.

23ರ ಹರೆಯದ ಜೈಸ್ವಾಲ್ ಟೆಸ್ಟ್ ಕ್ರಿಕೆಟ್‌ ನಲ್ಲಿ ತನ್ನ 6ನೇ ಹಾಗೂ ಇಂಗ್ಲೆಂಡ್ ವಿರುದ್ಧ 3ನೇ ಶತಕ ಸಿಡಿಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಭಾರತದ ಓರ್ವ ಬ್ಯಾಟರ್ ಆಗಿ ಹೊರಹೊಮ್ಮಿದರು.

ಜೈಸ್ವಾಲ್‌ರ ಶತಕ ಕೇವಲ ವೈಯಕ್ತಿಕ ಸಾಧನೆ ಮಾತ್ರವಲ್ಲ, ಇದು ಭಾರತೀಯ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದೆ. ಇದು ಸರಣಿಯಲ್ಲಿ ಭಾರತ ತಂಡದಿಂದ ದಾಖಲಾದ 12ನೇ ವೈಯಕ್ತಿಕ ಶತಕವಾಗಿದೆ. ಒಂದೇ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು ಅತ್ಯಂತ ಹೆಚ್ಚು ವೈಯಕ್ತಿಕ ಶತಕ ದಾಖಲಿಸಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದು ಗರಿಷ್ಠ ಜಂಟಿ ಸಾಧನೆಯಾಗಿದೆ.

ಈ ಹಿಂದೆ ಸರಣಿಯಲ್ಲಿ ಕೇವಲ ಮೂರು ತಂಡಗಳು ಮಾತ್ರ 12 ಶತಕಗಳನ್ನು ದಾಖಲಿಸಿದ್ದವು. ಆಸ್ಟ್ರೇಲಿಯ(ವಿಂಡೀಸ್ ವಿರುದ್ಧ, 1955), ಪಾಕಿಸ್ತಾನ(ಭಾರತದ ವಿರುದ್ಧ, 1982-83), ದಕ್ಷಿಣ ಆಫ್ರಿಕಾ(ವೆಸ್ಟ್‌ಇಂಡೀಸ್ ವಿರುದ್ಧ್ದ, 2003-04)ಈ ಸಾಧನೆ ಮಾಡಿದ್ದವು. ಭಾರತ ಈ ಪಟ್ಟಿಗೆ ಸೇರಿದೆ.

ಸರಣಿಯಲ್ಲಿ ಭಾರತದ ಬ್ಯಾಟಿಂಗ್‌ಗೆ ನಾಯಕ ಶುಭಮನ್ ಗಿಲ್ ನೇತೃತ್ವವಹಿಸಿದ್ದರು. ಅವರು ಸರಣಿಯಲ್ಲಿ ಒಟ್ಟು 4 ಶತಕಗಳನ್ನು ದಾಖಲಿಸಿದ್ದಾರೆ. ಒಟ್ಟು 754 ರನ್ ಮೂಲಕ ಗರಿಷ್ಠ ರನ್ ಸ್ಕೋರರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಜೈಸ್ವಾಲ್, ಕೆ.ಎಲ್.ರಾಹುಲ್ ಹಾಗೂ ರಿಷಭ್ ಪಂತ್ ಎಲ್ಲರೂ ತಲಾ 2 ಶತಕಗಳನ್ನು ಗಳಿಸಿದ್ದಾರೆ. ರವೀಂದ್ರ ಜಡೇಜ ಹಾಗೂ ಸುಂದರ್ ತಲಾ ಒಂದು ಶತಕ ಗಳಿಸಿದ್ದರು.

ಗಮನಾರ್ಹ ಅಂಶವೆಂದರೆ ಭಾರತದ ಐವರು ಬ್ಯಾಟರ್‌ಗಳಾದ-ಗಿಲ್, ಜೈಸ್ವಾಲ್, ರಾಹುಲ್, ಪಂತ್ ಹಾಗೂ ಜಡೇಜ 400ಕ್ಕೂ ಅಧಿಕ ರನ್ ಗಳಿಸಿದ್ದಾರೆ.

*ಟೆಸ್ಟ್ ಸರಣಿಯಲ್ಲಿ ಗರಿಷ್ಠ ಶತಕ ಗಳಿಸಿದ ತಂಡಗಳು

12-ವಿಂಡೀಸ್ ವಿರುದ್ಧ ಆಸ್ಟ್ರೇಲಿಯ, 1955(ವಿದೇಶ, 5 ಟೆಸ್ಟ್)

12-ಭಾರತದ ವಿರುದ್ಧ ಪಾಕಿಸ್ತಾನ,1982-83(ಸ್ವದೇಶ, 6 ಟೆಸ್ಟ್)

12-ವಿಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ, 2003-04(ಸ್ವದೇಶ, 4 ಟೆಸ್ಟ್)

12-ಇಂಗ್ಲೆಂಡ್ ವಿರುದ್ಧ ಭಾರತ, 2025(ವಿದೇಶ, 5 ಟೆಸ್ಟ್)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News