ಯಶಸ್ವಿ ಜೈಸ್ವಾಲ್ ಗೆ ಅನಾರೋಗ್ಯ: 7ರಿಂದ 10 ದಿನಗಳ ವಿಶ್ರಾಂತಿಗೆ ಸೂಚನೆ
ಯಶಸ್ವಿ ಜೈಸ್ವಾಲ್ | Photo Credit : NDTV
ಹೊಸದಿಲ್ಲಿ, ಡಿ.18: ಪುಣೆಯಲ್ಲಿ ರಾಜಸ್ಥಾನ ತಂಡದ ವಿರುದ್ಧ ಇತ್ತೀಚೆಗೆ ನಡೆದ ಸಯ್ಯದ್‌ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಮುಂಬೈ ತಂಡದ ಪರ ಆಡುತ್ತಿದ್ದಾಗ ಭಾರತದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ತೀವ್ರ ಉದರಬೇನೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಎರಡು ದಿನಗಳಲ್ಲಿ ಎರಡು ಕೆಜಿ ತೂಕ ಕಳೆದುಕೊಂಡಿದ್ದಾರೆ.
ಆರಂಭದಲ್ಲಿ ಸಾಮಾನ್ಯ ಉದರ ಬೇನೆಯಂತೆ ಕಂಡುಬಂದರೂ ಆಲ್ಟ್ರಾಸೌಂಡ್ ಹಾಗೂ ಇತರ ಅಗತ್ಯ ಸ್ಕ್ಯಾನಿಂಗ್‌ಗಳ ನಂತರ ತೀವ್ರ ಗ್ಯಾಸ್ಟ್ರೋಎಂಟರೈಟಿಸ್ ಇರುವುದು ಕಂಡುಬಂತು. ಅವರಿಗೆ ಔಷಧಿಗಳನ್ನು ನೀಡಲಾಗಿದ್ದು, ವಿಶ್ರಾಂತಿಗೆ ಸೂಚಿಸಲಾಗಿದೆ.
ಎಡಗೈ ಬ್ಯಾಟರ್ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮುಂಬೈಗೆ ತೆರಳಿದ್ದಾರೆ. ಜೈಸ್ವಾಲ್ ಎರಡು ಕೆಜಿ ತೂಕ ಕಳೆದುಕೊಂಡಿದ್ದು, ಮುಂದಿನ ಏಳರಿಂದ 10 ದಿನಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಪುಣೆ ಹೊಟೇಲ್‌ನಲ್ಲಿ ಏನೋ ತಿಂದಿದ್ದರಿಂದ ಈ ಸ್ಥಿತಿ ಉಂಟಾಗಿದೆ. ಅವರಿಗೆ ಹೊಟ್ಟೆನೋವು ಇತ್ತು. ಸರಿಯಾದ ಸಮಯಕ್ಕೆ ಔಷಧೋಪಚಾರ ನೀಡಿದ ನಂತರ ಅವರ ಸ್ಥಿತಿ ಈಗ ಸುಧಾರಿಸಿದೆ. ಕಳೆದ ಎರಡು ದಿನಗಳಲ್ಲಿ ಎರಡು ಕೆಜಿಗೂ ಅಧಿಕ ತೂಕ ಕಳೆದುಕೊಂಡಿದ್ದಾರೆ. ವೈದ್ಯರು ಮುಂದಿನ 7-10 ದಿನಗಳ ತನಕ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೈಸ್ವಾಲ್‌ಗೆ ಸಂಪೂರ್ಣ ಚೇತರಿಸಿಕೊಳ್ಳಲು ಕನಿಷ್ಠ ಒಂದು ವಾರದ ಅಗತ್ಯವಿದೆ. ಮುಂಬರುವ ವಿಜಯ ಹಝಾರೆ ಟ್ರೋಫಿ ಟೂರ್ನಿಯ ಆರಂಭಿಕ ಸುತ್ತುಗಳ ಪಂದ್ಯಗಳಿಂದ ವಂಚಿತರಾಗುವ ಸಾಧ್ಯತೆಯಿದೆ. ಮುಂಬೈ ತಂಡವು ಡಿ.24ರಂದು ಸಿಕ್ಕಿಂ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.
ಜನವರಿ 11ರಿಂದ ನ್ಯೂಝಿಲ್ಯಾಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಬಿಸಿಸಿಐ ವೈದ್ಯಕೀಯ ತಂಡವು ಜೈಸ್ವಾಲ್ ಮೇಲೆ ತೀವ್ರ ನಿಗಾವಹಿಸಿದೆ.