×
Ad

2ನೇ ಟೆಸ್ಟ್: ಸುನೀಲ್ ಗವಾಸ್ಕರ್ ದಾಖಲೆ ಮುರಿಯುವ ಹಾದಿಯಲ್ಲಿ ಯಶಸ್ವಿ ಜೈಸ್ವಾಲ್

Update: 2025-06-28 21:40 IST

 ಜೈಸ್ವಾಲ್ | PC : PTI  

ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್‌ ಗೆ ವೇಗವಾಗಿ 2,000 ಟೆಸ್ಟ್ ರನ್ ತಲುಪಿದ ಭಾರತೀಯ ಆಟಗಾರ ಎನಿಸಿಕೊಂಡು ಇತಿಹಾಸ ಮರು ರಚಿಸಲು ಕೇವಲ 97 ರನ್ ಗಳಿಸುವ ಅಗತ್ಯವಿದೆ.

ಜುಲೈ 2ರಿಂದ ಎಜ್‌ ಬಾಸ್ಟನ್‌ನಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಇಂಗ್ಲೆಂಡ್ ತಂಡವನ್ನು ಎದುರಿಸಲಿದ್ದು, ಯುವ ಎಡಗೈ ಬ್ಯಾಟರ್ ಜೈಸ್ವಾಲ್ ಅವರು ಬ್ಯಾಟಿಂಗ್ ಲೆಜೆಂಡ್ ಸುನೀಲ್ ಗವಾಸ್ಕರ್ ಹೆಸರಲ್ಲಿರುವ 49 ವರ್ಷಗಳ ಹಳೆಯ ದಾಖಲೆಯನ್ನು ಮುರಿಯುವ ವಿಶ್ವಾಸದಲ್ಲಿದ್ದಾರೆ.

ಟೆಸ್ಟ್ ಕ್ರಿಕೆಟ್‌ ನಲ್ಲಿ ಪರಿವರ್ತನೆಯ ಹಂತದಲ್ಲಿರುವ ಭಾರತ ತಂಡಕ್ಕೆ ಜೈಸ್ವಾಲ್ ಅವರ ಸ್ಥಿರ ಪ್ರದರ್ಶನವು ಧನಾತ್ಮಕ ಅಂಶವಾಗಿದೆ. ಇತ್ತೀಚೆಗೆ ಹೆಡ್ಡಿಂಗ್ಲೆಯಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಗಳಿಸಿದ್ದ ಜೈಸ್ವಾಲ್ ತನ್ನ ಸಾಮರ್ಥ್ಯ ಪ್ರದರ್ಶಿಸಿದ್ದರು. ಜೈಸ್ವಾಲ್‌ರ ಪ್ರಯತ್ನದ ಹೊರತಾಗಿಯೂ ಭಾರತ ತಂಡವು 5 ವಿಕೆಟ್‌ಗಳಿಂದ ಸೋಲುವುದು ತಪ್ಪಲಿಲ್ಲ.

ಎಜ್‌ ಬಾಸ್ಟನ್‌ ನಲ್ಲಿ ಪುಟಿದೇಳುವ ಗುರಿ ಇಟ್ಟುಕೊಂಡಿರುವ ಭಾರತ ತಂಡಕ್ಕೆ ಜೈಸ್ವಾಲ್‌ರ ವೈಯಕ್ತಿಕ ಫಾರ್ಮ್ ಅತಿದೊಡ್ಡ ವಿಶ್ವಾಸಕ್ಕೆ ಕಾರಣವಾಗಿದೆ. ಈ ತನಕ ಆಡಿರುವ ಕೇವಲ 20 ಟೆಸ್ಟ್ ಪಂದ್ಯಗಳಲ್ಲಿ ಜೈಸ್ವಾಲ್ ಅವರು 52.86ರ ಸರಾಸರಿಯಲ್ಲಿ 1,903 ರನ್ ಗಳಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ ನಲ್ಲಿ ವೇಗವಾಗಿ 2,000 ರನ್ ಗಳಿಸಿದ ದಾಖಲೆಯು ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಹೆಸರಲ್ಲಿದೆ. 1976ರಲ್ಲಿ ಗವಾಸ್ಕರ್ ಈ ಮೈಲಿಗಲ್ಲು ತಲುಪಿದ್ದರು. ಆ ನಂತರ ಗವಾಸ್ಕರ್ ಅವರು 10,000 ಟೆಸ್ಟ್ ರನ್ ಗಳಿಸಿದ ಮೊದಲ ಕ್ರಿಕೆಟಿಗನೆಂಬ ಕೀರ್ತಿಗೆ ಭಾಜನರಾಗಿದ್ದರು. ರಾಹುಲ್ ದ್ರಾವಿಡ್ ಹಾಗೂ ವೀರೇಂದ್ರ ಸೆಹ್ವಾಗ್ ತನ್ನ 25ನೇ ಟೆಸ್ಟ್ ಪಂದ್ಯದಲ್ಲಿ 2,000 ರನ್ ಪೂರೈಸಿದ್ದರು.

ದಿಟ್ಟ ಬ್ಯಾಟಿಂಗ್‌ನ ಮೂಲಕ ಗಮನ ಸೆಳೆಯುತ್ತಿರುವ ಜೈಸ್ವಾಲ್‌ ಗೆ ಈ ಎಲ್ಲ ಶ್ರೇಷ್ಠ ಆಟಗಾರರ ಸಾಲಿಗೆ ಸೇರುವ ಹಾಗೂ ಅವರ ದಾಖಲೆ ಮುರಿಯುವ ಅವಕಾಶವಿದೆ. ಈ ಮೂಲಕ ಭಾರತಕ್ಕೆ ಅಗತ್ಯವಿರುವ ಟೆಸ್ಟ್ ಪಂದ್ಯ ಜಯಿಸಲು ನೆರವಾಗಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News