×
Ad

ʼಲಕ್ನೊ ಸೂಪರ್ ಜಯಂಟ್ಸ್ʼ ತಂಡದ ಸಲಹೆಗಾರನಾಗಿ ಝಹೀರ್ ಖಾನ್ ನೇಮಕ

Update: 2024-08-28 21:38 IST

ಝಹೀರ್ ಖಾನ್ | PC : X 

ಹೊಸದಿಲ್ಲಿ,: ಭಾರತದ ಮಾಜಿ ಎಡಗೈ ವೇಗದ ಬೌಲರ್ ಝಹೀರ್ ಖಾನ್ ಅವರು ಬುಧವಾರ ಲಕ್ನೊ ಸೂಪರ್ ಜಯಂಟ್ಸ್ ತಂಡದ ಸಲಹೆಗಾರನಾಗಿ ನೇಮಕಗೊಂಡಿದ್ದಾರೆ.

ಕೋಲ್ಕತಾದಲ್ಲಿ ಆರ್‌ಪಿಎಸ್‌ಜಿ ಗ್ರೂಪ್ ಮುಖ್ಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ನೇಮಕ ನಡೆದಿದೆ.

ಈ ಹಿಂದೆ ಗೌತಮ್ ಗಂಭೀರ್ ಹೊಂದಿದ್ದ ಸಲಹೆಗಾರನ ಹುದ್ದೆಯನ್ನು ಝಹೀರ್ ವಹಿಸಿಕೊಳ್ಳಲಿದ್ದಾರೆ. ಗಂಭೀರ್ ಕಳೆದ ವರ್ಷ ಲಕ್ನೊ ತಂಡವನ್ನು ತೊರೆದು ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಸೇರಿಕೊಂಡಿದ್ದರು. ಕೆಕೆಆರ್ 3ನೇ ಬಾರಿ ಪ್ರಶಸ್ತಿ ಗೆಲ್ಲಲು ಮಾರ್ಗದರ್ಶನ ನೀಡಿದ್ದರು. ಗಂಭೀರ್ ಜುಲೈನಲ್ಲಿ ಭಾರತೀಯ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ.

45ರ ಹರೆಯದ ಝಹೀರ್ ಲಕ್ನೊದ ಕೋಚಿಂಗ್ ಸಿಬ್ಬಂದಿ ವರ್ಗವನ್ನು ಸೇರಿಕೊಳ್ಳಲಿದ್ದಾರೆ. ಜಸ್ಟಿನ್ ಲ್ಯಾಂಗರ್ ಲಕ್ನೊ ತಂಡದ ಮುಖ್ಯ ಕೋಚ್ ಆಗಿದ್ದರೆ, ಲ್ಯಾನ್ಸ್ ಕ್ಲೂಸ್ನರ್ ಹಾಗೂ ಆ್ಯಡಮ್ ವೋಗೆಸ್ ಸಹಾಯಕ ಕೋಚ್‌ಗಳಾಗಿದ್ದಾರೆ. ಮೊರ್ನೆ ಮೊರ್ಕೆಲ್ ಅವರು ಟೀಮ್ ಇಂಡಿಯಾವನ್ನು ಸೇರಿಕೊಂಡ ಕಾರಣ ಸದ್ಯ ಲಕ್ನೊ ತಂಡದ ಬೌಲಿಂಗ್ ಕೋಚ್ ಹುದ್ದೆ ತೆರವಾಗಿದೆ.

ಭಾರತದ 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿರುವ ಝಹೀರ್ ಅವರು ಆಟಗಾರ ಹಾಗೂ ಮೆಂಟರ್ ಆಗಿ ತನ್ನ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಐಪಿಎಲ್ ವೃತ್ತಿಜೀವನದಲ್ಲಿ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳನ್ನು ಪ್ರತಿನಿಧಿಸಿರುವ ಝಹೀರ್ ಒಟ್ಟು 100 ಪಂದ್ಯಗಳನ್ನು ಆಡಿದ್ದು 7.58ರ ಇಕಾನಮಿ ರೇಟ್‌ನಲ್ಲಿ 102 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಝಹೀರ್ ಈ ಹಿಂದೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಲ್ಲಿ 2018ರಿಂದ 2022ರ ತನಕ ಕಾರ್ಯನಿರ್ವಹಿಸಿದ್ದರು. ಮೊದಲಿಗೆ ಕ್ರಿಕೆಟ್ ನಿರ್ದೇಶಕರಾಗಿದ್ದ ಝಹೀರ್ ಆ ನಂತರ ಜಾಗತಿಕ ಕ್ರಿಕೆಟ್ ಅಭಿವೃದ್ದಿಯ ಮುಖ್ಯಸ್ಥರಾಗಿದ್ದರು.

ಐಪಿಎಲ್‌ನ 2023 ಹಾಗೂ 2024 ಋತುಗಳಲ್ಲಿ ಜಿಯೋ ಸಿನೆಮಾದ ಡಿಜಿಟಲ್ ಬ್ರಾಡ್‌ಕಾಸ್ಟ್‌ನಲ್ಲಿ ವೀಕ್ಷಕ ವಿವರಣೆ ತಂಡದಲ್ಲಿದ್ದರು.

2022ರಲ್ಲಿ ಸಂಜೀವ್ ಗೊಯೆಂಕಾರಿಂದ ಖರೀದಿಸಲ್ಪಟ್ಟಿರುವ ಲಕ್ನೊ ತಂಡ ತನ್ನ ತವರು ಪಂದ್ಯಗಳನ್ನು ಲಕ್ನೊದ ಎಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಡಲಿದೆ. 2022 ಹಾಗೂ 2023ರ ಋತುಗಳಲ್ಲಿ ಲಕ್ನೊ ತಂಡ ಪ್ಲೇ ಆಫ್ ಹಂತಕ್ಕೇರಿತ್ತು. ಆದರೆ 2024ರ ಐಪಿಎಲ್‌ನಲ್ಲಿ ನೆಗೆಟಿವ್ ರನ್‌ರೇಟ್ ಕಾರಣಕ್ಕೆ ಅಂಕಪಟ್ಟಿಯಲ್ಲಿ 7ನೇ ಸ್ಥಾನ ಪಡೆದು ಪ್ಲೇ ಆಫ್‌ಗೇರಲು ವಿಫಲವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News