×
Ad

ನಟ ಬಿ.ಸರೋಜಾದೇವಿ, ಕಸ್ತೂರಿ ರಂಗನ್ ಸಹಿತ ಅಗಲಿದ ಗಣ್ಯರಿಗೆ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ

Update: 2025-08-11 18:41 IST

ಬೆಂಗಳೂರು, ಆ. 11: ನಟಿ ಬಿ.ಸರೋಜಾದೇವಿ, ವಿಜ್ಞಾನಿ ಡಾ.ಕೆ.ಕಸ್ತೂರಿ ರಂಗನ್, ಸಾಹಿತಿಗಳಾದ ಪ್ರೊ.ಎಸ್.ಜಿ.ಸಿದ್ದಲಿಂಗಯ್ಯ, ಡಾ.ಎಚ್.ಎಸ್.ವೆಂಕಟೇಶಮೂರ್ತಿ, ಕ್ರೈಸ್ತರ ಧರ್ಮಗುರು ಪೋಪ್ ಫ್ರ್ಯಾನ್ಸಿಸ್, ಮಾಜಿ ಉಪಸಭಾಪತಿ ಡೇವಿಡ್ ಸಿಮೆಯೋನ್ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ, ಪಹಲ್ಗಾಮ್ ಉಗ್ರರ ದಾಳಿ ಮತ್ತು ಅಹಮದಾಬಾದ್‍ನ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ವಿಧಾನ ಮಂಡಲ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸೋಮವಾರ ಬೆಳಗ್ಗೆ 11ಗಂಟೆಯ ಸುಮಾರಿಗೆ ಮುಂಗಾರು ಅಧಿವೇಶನ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಯು.ಟಿ.ಖಾದರ್ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ನಿರ್ಣಯ ಮಂಡಿಸಿದರು. ಮಾಜಿ ಸಚಿವ ಬೇಗಾನೆ ರಾಮಯ್ಯ, ಮಾಜಿ ಶಾಸಕರಾದ ಕಾಕಸೋ ಪಾಂಡುರಂಗ ಪಾಟೀಲ್, ಎನ್. ರಾಜಣ್ಣ, ಪರಿಷತ್ ಸದಸ್ಯ ಡೆರ್ರಿಕ್ ಎಂ.ಬಿ. ಫುಲಿನ್‍ಫಾ, ಎನ್.ತಿಮ್ಮಣ್ಣ ಸೇರಿದಂತೆ ಅಗಲಿದ ಗಣ್ಯರನ್ನು ಸ್ಮರಿಸಿ, ಸದನಕ್ಕೆ ಮಾಹಿತಿ ನೀಡಿದರು. ಬಳಿಕ ಸಂತಾಪ ಸೂಚನೆ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಗಲಿದ ಗಣ್ಯರನ್ನು ಸ್ಮರಿಸಿ ಸಂತಾಪ ಸೂಚಿಸಿದರು.

ಭಾರತ ರತ್ನ ಕೊಡಿ: ವಿಜ್ಞಾನಿ ಡಾ.ಕೆ.ಕಸ್ತೂರಿರಂಗನ್ ಅವರಿಗೆ ‘ಭಾರತ ರತ್ನ’ ಪ್ರಶಸ್ತಿ ನೀಡಬೇಕು. ಕಸ್ತೂರಿ ರಂಗನ್‍ಗೆ ಪದ್ಮವಿಭೂಷಣ ಸೇರಿದಂತೆ ಎಲ್ಲ ಪ್ರಶಸ್ತಿಗಳು ದೊರೆತಿವೆ. ಭಾರತದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ‘ಭಾರತ ರತ್ನ’ವನ್ನು ಅವರಿಗೆ ಮರಣೋತ್ತರವಾಗಿ ನೀಡಬೇಕು ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಆಗ್ರಹಿಸಿದರು.

ಇದಕ್ಕೆ ಧ್ವನಿಗೂಡಿಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಡಾ.ಕೆ.ಕಸ್ತೂರಿ ರಂಗನ್ ಅವರ ಹೆಸರನ್ನು ರಾಜ್ಯದ ಯಾವುದಾದರೂ ಒಂದು ವಿಶ್ವ ವಿದ್ಯಾನಿಲಯಕ್ಕೆ ನಾಮಕರಣ ಮಾಡುವ ಮೂಲಕ ಗೌರವ ಸಲ್ಲಿಸಬೇಕು. ವಿದ್ಯಾರ್ಥಿಗಳು ಕಸ್ತೂರಿ ರಂಗನ್ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಸ್ಮರಿಸುತ್ತಾರೆ ಎಂದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಇತ್ತೀಚೆಗೆ ನಿಧನರಾದ ಡೆರ್ರಿಕ್ ಎಂ.ಬಿ.ಫುಲಿನ್ ಫಾ ಅವರು ಆಂಗ್ಲೋ-ಇಂಡಿಯನ್ ಸದಸ್ಯ ನಾಮನಿರ್ದೇಶಿತ ಸದಸ್ಯರಾಗಿದ್ದರು. ಕೇಂದ್ರ ಸರಕಾರ ರಾಜ್ಯಸಭೆ, ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಈ ನಾಮನಿರ್ದೇಶನ ಮಾಡುವುದನ್ನು ರದ್ದು ಮಾಡಿದೆ. ಆಂಗ್ಲೋ-ಇಂಡಿಯನ್ ಸದಸ್ಯ ಸ್ಥಾನಕ್ಕೆ ನೇಮಕ ಮಾಡಿದರೆ ಆ ಸಮುದಾಯಕ್ಕೆ ಅನುಕೂಲ ಆಗುತ್ತಿತ್ತು. ಹೀಗಾಗಿ ಆಂಗ್ಲೋ-ಇಂಡಿಯನ್ ಸದಸ್ಯ ಸ್ಥಾನಕ್ಕೆ ನಾಮನಿರ್ದೇಶನ ಮುಂದುವರಿಸಬೇಕು ಎಂದು ಮನವಿ ಮಾಡಿದರು.

ನೀರು ಕೊಟ್ಟ ಭಗೀರಥ: ಬಿಜೆಪಿ ಸದಸ್ಯ ಆರಗ ಜ್ಞಾನೇಂದ್ರ ಮಾತನಾಡಿ, ಇತ್ತೀಚೆಗೆ ನಿಧನರಾದ ಚಿಕ್ಕಮಗಳೂರು ಮೂಲದ ಬೇಗಾನೆ ರಾಮಯ್ಯ ಮಲೆನಾಡಿನ ಭಾಗದಲ್ಲಿ ಬೋರ್‍ವೆಲ್ ಕೊರೆಸಿ ನೀರು ಕೊಟ್ಟ ಭಗೀರಥ. ಈ ಹಿಂದೆ ಕೊಳವೆಬಾವಿ ಕೊರೆಸಲು ಕನಿಷ್ಟ 250 ಮಂದಿ ಜನವಸತಿ ಇರಬೇಕೆಂಬ ನಿಯಮವಿತ್ತು. ಆದರೆ, ಅದನ್ನು ಬದಲಾವಣೆ ಮಳೆನಾಡು ಭಾಗದಲ್ಲಿ ಕೊಳವೆಬಾವಿ ಕೊರೆಸುವ ಮೂಲಕ ‘ಬೋರ್‍ವೆಲ್ ರಾಮಯ್ಯ’ ಎಂದೇ ಖ್ಯಾತಿ ಗಳಿಸಿದ್ದರು ಎಂದು ಸ್ಮರಿಸಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‍ಬಾಬು, ಬಿಜೆಪಿ ಸದಸ್ಯರಾದ ಸುರೇಶ್ ಕುಮಾರ್, ಬಿ.ವೈ. ವಿಜಯೇಂದ್ರ ಸೇರಿದಂತೆ ಇನ್ನಿತರರು ಸಂತಾಪ ಸೂಚನೆ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದರು. ಆ ಬಳಿಕ ಸದನದಲ್ಲಿ ಮೃತರ ಗೌರವಾರ್ಥ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News