ಉಪೇಂದ್ರ ವಿರುದ್ಧದ ಪ್ರಕರಣದ ಸಾಕ್ಷಿ ನಾಶಕ್ಕೆ ಯತ್ನ ಆರೋಪ: ದೂರು ದಾಖಲು
ಬೆಂಗಳೂರು, ಆ.30: ಚಿತ್ರನಟ ಉಪೇಂದ್ರ ವಿರುದ್ಧ ದಾಖಲಾಗಿದ್ದ ಪ್ರಕರಣದ ಸಾಕ್ಷಿ ನಾಶ, ದೂರುದಾರರಿಗೆ ಬೆದರಿಕೆ ಆರೋಪದಡಿಯಲ್ಲಿ ನಗರದ ವಿವಿ ಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ.
ಕರ್ನಾಟಕ ರಣಧೀರ ಪಡೆ ರಾಜ್ಯಾಧ್ಯಕ್ಷ ಭೈರಪ್ಪ ಹರೀಶ್ ಕುಮಾರ್ ದೂರು ನೀಡಿದ್ದು, ‘ಜಾತಿ ನಿಂದನೆ ಹೇಳಿಕೆ ನೀಡಿದ ಆರೋಪದ ಮೇಲೆ ನಟ ಉಪೇಂದ್ರ ವಿರುದ್ಧ ಈ ಹಿಂದೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಮೈಸೂರಿನ ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮತ್ತು ನಟ ಉಪೇಂದ್ರ ಅವರು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ. ಪ್ರಕರಣದ ಸಾಕ್ಷಿಗಳನ್ನು ನಾಶ ಪಡಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.
‘ಊರು ಅಂದರೆ ಹೊಲಗೇರಿ ಇದ್ದೇ ಇರುತ್ತೆ’ ಎನ್ನುವ ಹೇಳಿಕೆ ನೀಡಿರುವ ನಟ ಉಪೇಂದ್ರ ಅವರು ದಲಿತ ನಿಂದನೆ, ಸಾಮಾಜಿಕ ಅಶಾಂತಿ ಮೂಡಿಸಿದ್ದಾರೆ. ಅಲ್ಲದೆ ಆರೋಪಿ ಉಪೇಂದ್ರ ವಿರುದ್ಧ ದಾಖಲಾದ ಪ್ರಕರಣವನ್ನು ಹಿಂಪಡೆಯುವಂತೆ ಒತ್ತಡ ಹೇರಿ, ಗೊಂದಲ ಸೃಷ್ಠಿಸಿ ದೂರುದಾರರಿಗೆ ಹಾನಿ ಮಾಡುತ್ತಿದ್ದಾರೆ ಎಂದು ಭೈರಪ್ಪ ಹರೀಶ್ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆ ಆರೋಪಿಗಳ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.