×
Ad

ಸೌಜನ್ಯ, ಧರ್ಮಸ್ಥಳ ಪ್ರಕರಣದ ಪ್ರಮುಖ ಆರೋಪಿ ಯಾರೆಂದು ತಿಳಿಸಬೇಕು : ಎಸ್.ಬಾಲನ್

ಧರ್ಮಸ್ಥಳದಲ್ಲಿ ಯೂಟ್ಯೂಬರ್‌ಗಳು-ಪತ್ರಕರ್ತರ ಮೇಲಿನ ಹಲ್ಲೆ ಖಂಡಿಸಿ ಸಭೆ

Update: 2025-08-07 22:54 IST

ಬೆಂಗಳೂರು, ಆ.7: ನನ್ನ ಒತ್ತಾಯ ಏನೆಂದರೆ ಸೌಜನ್ಯ ಹಾಗೂ ಧರ್ಮಸ್ಥಳ ಪ್ರಕರಣದ ಪ್ರಮುಖ ಆರೋಪಿ ‘ಬಿ’ ಯಾರು ಎಂದು ತಿಳಿಸಬೇಕು. ಪ್ರಕರಣದಲ್ಲಿ ಒಟ್ಟು ಎಷ್ಟು ಬೆಕ್ಕುಗಳಿವೆ. ಕಪ್ಪು ಬೆಕ್ಕು ಕತ್ತಲೆಯಿಂದ ಹೊರಗೆ ಬಂದಿದೆ. ಅದನ್ನು ಯಾರು ಯಾವಾಗ ಸುಟ್ಟು ಹಾಕುತ್ತಾರೋ ಗೊತ್ತಿಲ್ಲ ಎಂದು ಹಿರಿಯ ವಕೀಲ ಎಸ್.ಬಾಲನ್ ತಿಳಿಸಿದ್ದಾರೆ.

ಗುರುವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಧರ್ಮಸ್ಥಳದಲ್ಲಿ ನಡೆದ ಯೂಟ್ಯೂಬರ್ ಹಾಗೂ ಪತ್ರಕರ್ತರ ಮೇಲಿನ ಹಲ್ಲೆಯನ್ನು ಖಂಡಿಸಿ ನಡೆದ ‘ಖಂಡನಾ ಸಭೆ’ಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇತ್ತೀಚಿಗೆ ನಾನು ಫ್ರೀಡಂ ಪಾರ್ಕ್‍ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡುವಾಗ ಸೌಜನ್ಯ ಎಂದರೆ ಫ್ಲವರ್ ಅಲ್ಲ. ಫೈಯರ್ ಎಂದು ಹೇಳಿದ್ದೆ, ಆ ಫೈಯರ್ ಈಗ ಸುಡುತ್ತಿದೆ. ಅದಕ್ಕಾಗಿ ಕೇಡಿಗಳು, ಗೂಂಡಾಗಳು ಹೊರಗೆ ಬಂದು ಗಲಾಟೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರೋಪಿಗಳಿಗೆ ಕಾನೂನಿನ ಮೇಲೆ ನಂಬಿಕೆಯಿಲ್ಲ. ಎಲ್ಲ ಭ್ರಷ್ಟಾಚಾರಿಗಳು, ಅತ್ಯಾಚಾರಿ, ಹಿಂಸಾಚಾರಿಗಳಿಗೆ ಕಾನೂನಿನ ಅಡಿಯಲ್ಲಿ ಏನು ಕ್ರಮ ಆಗಬೇಕೋ ಅದು ಆಗಲೇಬೇಕು ಎಂದು ಆಗ್ರಹಿಸಿದರು.

ಸೌಜನ್ಯ-ಧರ್ಮಸ್ಥಳ ಪ್ರಕರಣದಲ್ಲಿ ಎಬಿಸಿಡಿ ವಿಚಾರಗಳು ನಡೆಯುತ್ತಿವೆ. 1979ರಲ್ಲಿ ‘ಎ’ ಸಿಗಲಿಲ್ಲ. 1983ರಲ್ಲಿ ‘ಎಬಿ’ ಸಿಗಲಿಲ್ಲ. 2003ರಲ್ಲಿಯೂ ಎಬಿಸಿ ಸಿಗಲಿಲ್ಲ. 2012ರಲ್ಲಿ ಎಬಿಸಿಡಿ ಸಿಗಲಿಲ್ಲ. 2012 ಮತ್ತು 2015ರಲ್ಲಿ ಸೌಜನ್ಯ ಪ್ರಕರಣದ ದೊಡ್ಡ ಹೋರಾಟ ನಡೆಯಿತು. ಪಿತೂರಿ, ಷಡ್ಯಂತ್ರದಿಂದ ಅಮಾಯಕನಿಗೆ ಶಿಕ್ಷೆ ವಿಧಿಸಲಾಯಿತು. ಎಬಿಸಿಡಿ ಎಲ್ಲ ಆರೋಪಿಗಳು ಇಷ್ಟು ವರ್ಷ ಸಿಗಲಿಲ್ಲ. 2025ರ ಜು.3ರಂದು ಎ ಹೊರಗಡೆ ಬಂದಿದೆ. ಇಷ್ಟು ವರ್ಷ ಕಪ್ಪು ಬೆಕ್ಕು ಕತ್ತಲೆಯಲ್ಲಿತ್ತು. ಈಗ ಹೊರಗೆ ಬಂದಿದೆ ಎಂದು ಹೇಳಿದರು.

ಅಂಕಣಕಾರ ಶಿವಸುಂದರ್ ಮಾತನಾಡಿ, ನಾವು ಹೋರಾಟ ಮಾಡುತ್ತಿರುವ ಸಂದರ್ಭ ಬಹಳ ಗಂಭೀರವಾಗಿದೆ. ಸರಕಾರವನ್ನು ವಿಮರ್ಶೆ ಮಾಡಿದರೆ ದೇಶವನ್ನೇ ವಿಮರ್ಶೆ ಮಾಡಿದಂತೆ ಎಂದು ಭಾವಿಸುವ ನ್ಯಾಯಾದೀಶರು ಇದ್ದಾರೆ. ಆಡಳಿತಾಧಿಕಾರಿಯನ್ನು ವಿಮರ್ಶೆ ಮಾಡಿದರೆ ದೇವರನ್ನೇ ಬೈಯುತ್ತಿದ್ದಾರೆ ಎಂದು ಜನರನ್ನು ಎತ್ತಿಕಟ್ಟುವವರು ಇದ್ದಾರೆ ಎಂದು ತಿಳಿಸಿದರು.

ವೇದವಲ್ಲಿ ಪ್ರಕರಣ, ಪದ್ಮಲತಾ, 2012ರಲ್ಲಿ ಸೌಜನ್ಯ ಪ್ರಕರಣ ಈ ಎಲ್ಲಾ ಪ್ರಕರಣಗಳಲ್ಲಿ ಆಸ್ತಿ, ಅಧಿಕಾರ, ಸಂಪತ್ತಿನ ಜತೆಗೆ ವೈರುಧ್ಯವಿರುವ ಒಂದು ಮೇಲ್ವರ್ಗಕ್ಕೆ ಸಂಬಂಧ ಇರಬಹುದಾದ ಆರೋಪಗಳು ಕೇಳಿ ಬಂದಿವೆ. ಈಗ ಅನೇಕ ಅಸ್ಥಿಪಂಜರಗಳು ಸಿಗುತ್ತಿವೆ. ಅದಕ್ಕಾಗಿ ಭೀಮ ವಿಶ್ವಾಸದಿಂದ ಇದ್ದಾನೆ ಎಂದು ತಿಳಿಸಿದರು.

 ಪ್ರಜಾಪ್ರಭುತ್ವದನ್ನು ರಕ್ಷಿಸಬೇಕಾಗಿರುವ ಎಲ್ಲರೂ ಧರ್ಮ ಮತ್ತು ಧರ್ಮಸ್ಥಳ ಎರಡರ ಹಿಂದಿರುವ ರಾಜಕೀಯವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಹಿರಿಯ ಪತ್ರಕರ್ತ ಡಿ.ಉಮಾಪತಿ, ಹಿರಿಯ ವಕೀಲ ಎ.ಪಿ.ರಂಗನಾಥ್, ಲೇಖಕಿ ರೇಣುಕಾ ನಿಡಗುಂದಿ, ವಿಚಾರವಾದಿ ಮುರಳಿಕೃಷ್ಣ, ಸಾಮಾಜಿಕ ಹೋರಾಟಗಾರ ಮಲ್ಲು ಕುಂಬಾರ್, ವಿದ್ಯಾರ್ಥಿ ನಾಯಕಿ ಅರ್ಪಿತಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News