×
Ad

‘ದೌರ್ಜನ್ಯಕ್ಕೊಳಗಾಗಿ ಮೃತಪಟ್ಟ ಎಸ್‍ಸಿ-ಎಸ್‍ಟಿ ಅವಲಂಬಿತರಿಗೆ ಸರಕಾರಿ ಉದ್ಯೋಗ’ : ಸಚಿವ ಸಂಪುಟ ನಿರ್ಣಯ

Update: 2025-09-18 20:19 IST

ಬೆಂಗಳೂರು, ಸೆ.18: ದೌರ್ಜನ್ಯಕ್ಕೊಳಗಾಗಿ ಮೃತಪಟ್ಟ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಸೇರಿದ ವ್ಯಕ್ತಿಗಳ ಅವಲಂಬಿತರಿಗೆ ಗ್ರೂಪ್-ಸಿ ಮತ್ತು ಗ್ರೂಪ್-ಡಿ ವೃಂದದ ಹುದ್ದೆಗಳಿಗೆ ಅನುಕಂಪದ ಆಧಾರದ ಮೇಲೆ ಸರಕಾರಿ ಉದ್ಯೋಗ ನೀಡಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ದೌರ್ಜನ್ಯಕ್ಕೊಳಗಾಗಿ ಮೃತಪಟ್ಟ ಒಟ್ಟು 87 ಪ್ರಕರಣಗಳನ್ನು ಅನುಕಂಪದ ಆಧಾರದ ಮೇಲೆ ವಿಶೇಷ ಪ್ರಕರಣಗಳೆಂದು ಒಂದು ಬಾರಿಗೆ ಮಾತ್ರ ಪರಿಗಣಿಸಿ, ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್-ಸಿ ಮತ್ತು ಗ್ರೂಪ್-ಡಿ ವೃಂದದ ಹುದ್ದೆಗಳಿಗೆ ನೇಮಕಾತಿ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಅಪ್ರಾಪ್ತ ವಯಸ್ಸಿನ ಪ್ರಕರಣಗಳಲ್ಲಿ ಇನ್ನು ಮುಂದೆ ಅನುಕೂಲವಾಗುವಂತೆ ಕರ್ನಾಟಕ ನಾಗರಿಕ ಸೇವಾ (ದೌರ್ಜನ್ಯದಿಂದ ಮೃತಪಟ್ಟ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಕ್ಕೆ ಸೇರಿದ ವ್ಯಕ್ತಿಗಳ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರಿತ ನೇಮಕಾತಿ) (ವಿಶೇಷ) (ತಿದ್ದುಪಡಿ) ನಿಯಮಗಳು 2022ರ ನಿಯಮ 4(1)ಕ್ಕೆ ತಿದ್ದುಪಡಿ ಮಾಡುವ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ನಿರ್ದೇಶನ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

ರಾಜ್ಯದ 9337 ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು ಸಿದ್ಧಪಡಿಸಲು ಹೊಸ ಪಾತ್ರೆ ಪರಿಕರಗಳನ್ನು ಸಿದ್ಧಪಡಿಸಲು ಅಗತ್ಯವಿರುವ ಅನುದಾನವನ್ನು ರಾಜ್ಯ ಸರಕಾರದ ಕ್ಷೀರಭಾಗ್ಯ ಯೋಜನೆಯಡಿ 21.55 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಭರಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಅಧಿಕಾರಿ, ನೌಕರರು ಮುಂಭಡ್ತಿ ಹೊಂದಲು ತರಬೇತಿಯನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ. ಅದರಂತೆ, ರಾಜ್ಯ ನಾಗರಿಕ ಸೇವಾ (ಮುಂಭಡ್ತಿಗಾಗಿ ತರಬೇತಿ ಕಡ್ಡಾಯ) ನಿಯಮಗಳು, 2025ರ ಕರಡು ನಿಯಮವನ್ನು ಅಧಿಸೂಚಿಸಿ, ಬಾಧಿತರಿಂದ ಆಕ್ಷೇಪಣೆ ಸ್ವೀಕರಿಸಲು 15 ದಿನಗಳ ಕಾಲಾವಕಾಶ ನೀಡಲಾಗುವುದು. ಈ ಕರಡು ನಿಯಮಗಳಿಗೆ ಯಾವುದೇ ಆಕ್ಷೇಪಣೆ, ಸಲಹೆಗಳು ಸ್ವೀಕೃತವಾಗದಿದ್ದಲ್ಲಿ ಅಥವಾ ಆಕ್ಷೇಪಣೆ, ಸಲಹೆಗಳನ್ನು ಪರಿಗಣಿಸಿ ಕರಡು ನಿಯಮಗಳನ್ನು ಅಂತಿಮಗೊಳಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

ಇತರ ನಿರ್ಣಯಗಳು: ಬೆಂಗಳೂರು ದಕ್ಷಿಣ ತಾಲೂಕಿನ ಸರ್ ಎಂ.ವಿಶ್ವೇಶ್ವರಯ್ಯ ನಗರದಲ್ಲಿ ಛಲವಾದಿ ಮಹಾಸಭಾ ವತಿಯಿಂದ ನಿರ್ಮಿಸುತ್ತಿರುವ ಛಲವಾದಿ ಸಮುದಾಯ ಭವನದ 22.33 ಕೋಟಿ ರೂ.ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.

ಬೆಂಗಳೂರಿನ ಮಾಗಡಿ ಮುಖ್ಯ ರಸ್ತೆಯಲ್ಲಿರುವ ಕೇಂದ್ರ ಪರಿಹಾರ ಸಮಿತಿಗೆ ಸೇರಿದ ಜಮೀನಿನಲ್ಲಿ ಸುಮನಹಳ್ಳಿ ಸೊಸೈಟಿಗೆ ಗುತ್ತಿಗೆಗೆ ನೀಡಲಾದ ಜಮೀನಿನ ಪೈಕಿ ಸರ್ವೆ ನಂ.4ರಲ್ಲಿ ಲಭ್ಯವಿರುವ 15 ಎಕರೆ 16 ಗುಂಟೆ ಜಮೀನನ್ನು ಹಿಂಪಡೆದು, ಆ ಜಮೀನಿನಲ್ಲಿ ಮಾನಸಿಕ ಆರೋಗ್ಯ ಕೇಂದ್ರ, ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ(ಐಜಿಸಿಸಿಡಿ) ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಮತ್ತು ಕೇಂದ್ರ ಪರಿಹಾರ ಸಮಿತಿಯಿಂದ ಸಿದ್ಧ ಉಡುಪು ಘಟಕಗಳನ್ನು ಸ್ಥಾಪಿಸಲು ಅನುಮೋದನೆ.

90 ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಅನುಷ್ಠಾನಗೊಂಡಿರುವ ಫಿಟ್ಟರ್ ಮತ್ತು ಎಲೆಕ್ಟ್ರೀಷಿಯನ್ ವೃತ್ತಿಗಳಿಗೆ ಡಿಜಿಟಿ ಪಠ್ಯಕ್ರಮದಂತೆ ಅಗತ್ಯವಿರುವ ಉಪಕರಣ ಮತ್ತು ಯಂತ್ರೋಪಕರಣಗಳನ್ನು 50 ಕೋಟಿ ರೂ. ಅಂದಾಜು ಮೊತ್ತದಲ್ಲಿ ಖರೀದಿಸಿ ಒದಗಿಸಲು ಅನುಮೋದನೆ.

ಗಾಂಧಿ ನಗರ ವಿಧಾನಸಭಾ ಕ್ಷೇತ್ರದ ರಸ್ತೆಗಳಿಗೆ 58.44 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ವೈಟ್ ಟಾಪಿಂಗ್ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ. ಹಾಗೂ ಕೋಲಾರ ಜಿಲ್ಲೆಯ ಬಂಗಾರಪೇಟೆ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ನಿರ್ಧಾರ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ವ್ಯಾಪ್ತಿಯಯಲ್ಲಿನ ಕರ್ನಾಳ್ ಏತ ನೀರಾವರಿ ಯೋಜನೆಯನ್ನು 50.75 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಹಾಗೂ ಬೆಂಗಳೂರಿನ ದಾಸನಪುರ, ಕೋಲಾರ, ಮೈಸೂರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ತಲಾ ಒಂದು 50 ಟಿಪಿಡಿ ಜೈವಿಕ ಸಿಎನ್‍ಜಿ ಘಟಕಗಳನ್ನು ಒಟ್ಟು 74.88 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಸ್ಥಾಪಿಸಲು ಅನುಮೋದನೆ.

ರಾಜ್ಯ ಲೋಕಸೇವಾ ಆಯೋಗದ 2024-25ನೆ ಸಾಲಿನ ವಾರ್ಷಿಕ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸಿ, ಅವರಿಂದ ಅನುಮೋದನೆ ಪಡೆದ ಬಳಿಕ ಮುಂದಿನ ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಲು ನಿರ್ಧಾರ.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿ.ಪಿ.ಪಿ ಮಾದರಿ) ಕಾರ್ಡಿಯಾಕ್ ಯೂನಿಟ್ ಸ್ಥಾಪಿಸಲು ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ಖರೀದಿಸಲು 10.89 ಕೋಟಿ ರೂ. ತಗುಲಿದ್ದು, ಈ ವೆಚ್ಚವನ್ನು ರಾಜ್ಯ ಪರೀಕ್ಷಾ ಪ್ರಾಧಿಕಾರದಿಂದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಮಂಜೂರು ಮಾಡಲಾಗಿರುವ 5 ಕೋಟಿ ರೂ. ಹಾಗೂ ಇನ್ನುಳಿದ 5.89 ಕೋಟಿ ರೂ.ಗಳ ಅನುದಾನವನ್ನು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಂತರಿಕ ಸಂಪನ್ಮೂಲದಿಂದ ಭರಿಸಲು ಸಚಿವ ಸಂಪುಟ ನಿರ್ಣಯಿಸಿದೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಸ.ನಂ.534/1ಎ1ರಲ್ಲಿ 0.14 ಎಕರೆ (14 ಸೆಂಟ್ಸ್) ವಿಸ್ತೀರ್ಣದ ಜಮೀನನ್ನು ಕಾಂಗ್ರೆಸ್ ಭವನ ಕಟ್ಟಡ ನಿರ್ಮಾಣದ ಉದ್ದೇಶಕ್ಕೆ ಕಾಂಗ್ರೆಸ್ ಭವನ ಟ್ರಸ್ಟ್ (ರಿ), ಬೆಂಗಳೂರು ಇವರಿಗೆ ಮಂಜೂರು ಮಾಡಲು ನಿರ್ಧರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News