ವಾರ್ಷಿಕ ವಹಿವಾಟು 40 ಲಕ್ಷ ರೂ.ಗಳಿಗಿಂತ ಹೆಚ್ಚಿದ್ದವರಿಗೆ ಜಿಎಸ್‍ಟಿ ಪಾವತಿಸುವಂತೆ ವಾಣಿಜ್ಯ ಇಲಾಖೆ ನೋಟಿಸ್
ಸಾಂದರ್ಭಿಕ ಚಿತ್ರ | PTI
ಬೆಂಗಳೂರು : ಸಣ್ಣ-ಪುಟ್ಟ ವ್ಯಾಪಾರಿಗಳಿಗೆ ಲಕ್ಷಾಂತರ ರೂಪಾಯಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಕಟ್ಟುವಂತೆ ವಾಣಿಜ್ಯ ಇಲಾಖೆ ನೋಟಿಸ್ ನೀಡುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದ ಎಲ್ಲೆಡೆ ಸಣ್ಣ ಬೇಕರಿ, ಹೋಟೆಲ್, ಟೀ ಅಂಗಡಿ, ಸಲೂನ್‍ಗಳನ್ನು ನಡೆಸುತ್ತಿರುವ ವ್ಯಾಪಾರಿಗಳು ಯುಪಿಐ ಮೂಲಕ ಹಣ ಪಡೆಯುತ್ತಿದ್ದರೆ, ಅಂತಹವರ ಹಣಕಾಸು ವಹಿವಾಟಿನ ವಿವರವನ್ನು ವಾಣಿಜ್ಯ ತೆರಿಗೆ ಇಲಾಖೆಯು ಕಲೆಹಾಕಿದ್ದು, ಯುಪಿಐ ಮೂಲಕ ವಾರ್ಷಿಕ ವಹಿವಾಟು 40 ಲಕ್ಷ ರೂ.ಗಳಿಗಿಂತ ಹೆಚ್ಚು ಇದ್ದವರಿಗೆ ಜಿಎಸ್‍ಟಿ ಪಾವತಿಸುವಂತೆ ನೋಟಿಸ್ ನೀಡಲಾಗಿದೆ.
ಸಣ್ಣಪುಟ್ಟ ಅಂಗಡಿಗಳು ಫೋನ್ ಪೇ, ಗೂಗಲ್ ಪೇ ಹಾಗೂ ಆನ್‍ಲೈನ್ ಪೇಮೆಂಟ್ ಮೂಲಕ ವಹಿವಾಟು ನಡೆಸುತ್ತಾರೆ. ಈ ಆನ್‍ಲೈನ್ ಪಾವತಿಯಲ್ಲಿನ ವಹಿವಾಟು ಆಧಾರದಲ್ಲಿ ವಾಣಿಜ್ಯ ಇಲಾಖೆ ನೋಟಿಸ್ ನೀಡಲಾಗುತ್ತಿದೆ.
ವಾಣಿಜ್ಯ ತೆರಿಗೆ ಇಲಾಖೆ ಸ್ಪಷ್ಟನೆ :
ಈ ಸಂಬಂಧ ವಾಣಿಜ್ಯ ತೆರಿಗೆ ಇಲಾಖೆ ಸ್ಪಷ್ಟನೆ ನೀಡಿದ್ದು, ಮಾಧ್ಯಮಗಳಲ್ಲಿ ಸಣ್ಣಪುಟ್ಟ ವರ್ತಕರಿಗೆ ವಾಣಿಜ್ಯ ತೆರಿಗೆ ಇಲಾಖೆಯು ನೀಡಿರುವ ನೋಟಿಸ್‍ಗಳ ಬಗ್ಗೆ ವರದಿಯಾಗಿದೆ. ಜುಲೈ 1, 2017ರಿಂದ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯು ದೇಶಾದ್ಯಂತ ಜಾರಿಗೆ ಬಂದಿದೆ. ಈ ಕಾಯ್ದೆಯ ಕಲಂ 22ರ ಅನ್ವಯ ಸರಕು ಪೂರೈಕೆದಾರರ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ 40 ಲಕ್ಷ ರೂ.ಗಳನ್ನು ಮೀರಿದರೆ ಅಥವಾ ಸೇವೆಗಳ ಪೂರೈಕೆದಾರರ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ 20 ಲಕ್ಷ ರೂ.ಗಳನ್ನು ಮೀರಿದರೆ ಜಿಎಸ್‍ಟಿ ನೋಂದಣಿ ಪಡೆಯುವುದು ಕಡ್ಡಾಯವಾಗಿದೆ. ಈ ಸಮಗ್ರ ವಹಿವಾಟಿನಲ್ಲಿ ಸರಕು ಮತ್ತು ಸೇವೆಗಳು ಸೇರಿದೆ. ಆದರೆ ತೆರಿಗೆ ಬಾಧ್ಯತೆಯು ತೆರಿಗೆ ವಿಧಿಸಬಲ್ಲ ಸರಕುಗಳು/ಸೇವೆಗಳಿಗೆ ಮಾತ್ರ ಅನ್ವಯವಾಗುತ್ತದೆ. ತೆರಿಗೆ ಬಾಧ್ಯತೆಯು ಮಾರಾಟ ಮಾಡಿದ ಸರಕುಗಳ ಪ್ರಕಾರ ನಿರ್ಧರಿಸಲ್ಪಡುತ್ತದೆ. (ಉದಾಹರಣೆಗೆ ಬ್ರೆಡ್ ಮಾರಾಟದ ಮೇಲೆ ತೆರಿಗೆ ಇರುವುದಿಲ್ಲ. ಕುರುಕಲು ತಿಂಡಿಗಳ ಮೇಲೆ ಶೇ.5ರಷ್ಟು ತೆರಿಗೆ ಬಾದ್ಯತೆ ಇರುತ್ತದೆ) ಎಂದು ವಿವರಿಸಿದೆ.
ವಾಣಿಜ್ಯ ತೆರಿಗೆಗಳ ಇಲಾಖೆ ಏಕೀಕೃತ ಪಾವತಿ ವ್ಯವಸ್ಥೆ(ಯುಪಿಐ) ಮೂಲಕ ವರ್ತಕರು 2021-22ರಿಂದ 2024-25ರ ಸಾಲಿನಲ್ಲಿ ಸ್ವೀಕರಿಸಿರುವ ಹಣದ ವಿವರಗಳನ್ನು ವಿವಿಧ ಯುಪಿಐ ಸೇವೆಗಳ ಪೂರೈಕೆದಾರರಿಂದ ಸಂಗ್ರಹಿಸಲಾಗಿದೆ. ವರ್ತಕರು ಮಾರಾಟದ ಹಣವನ್ನು(ಯುಪಿಐ) ಮಾತ್ರವಲ್ಲದೇ, ನಗದು ಮತ್ತು ಇತರ ವಿಧಾನಗಳಲ್ಲಿ ಕೂಡ ಪಡೆಯುತ್ತಾರೆ. ಹಾಗಾಗಿ, ಯುಪಿಐ ಮೂಲಕ 40 ಲಕ್ಷ ರೂ.ಗಳಿಗಿಂತ ಹೆಚ್ಚಿನ ಹಣವನ್ನು ಪಡೆದಿರುವ ವರ್ತಕರ ವಾರ್ಷಿಕ ವಹಿವಾಟು ಇನ್ನೂ ಗಣನೀಯವಾಗಿ ಹೆಚ್ಚಾಗಿದೆ. ಈ ಮಾಹಿತಿಯನ್ನು ಪರಿಶೀಲಿಸಿ, 40 ಲಕ್ಷ ರೂ.ಗಳಿಗಿಂತ ಹೆಚ್ಚಿನ ಹಣವನ್ನು ಪಡೆದು ಸರಕು ಮತ್ತು ಸೇವಾ ತೆರಿಗೆ ಕಾಯ್ದೆ-2017ರ ಅಡಿಯಲ್ಲಿ ನೋಂದಣಿಯನ್ನು ಪಡೆಯದೆ, ತೆರಿಗೆ ಪಾವತಿಸದೆ ಇರುವ ವರ್ತಕರಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಇಲಾಖೆಯು ಸ್ಪಷ್ಟಪಡಿಸಿದೆ.
ಈ ನೋಟಿಸ್‍ಗಳಿಗೆ, ವರ್ತಕರು ತಾವು ಮಾರಾಟ ಮಾಡಿದ ಸರಕು ಮತ್ತು ಸೇವೆಗಳ ವಿವರಗಳನ್ನು ನೀಡಿ ಸರಿಯಾದ ತೆರಿಗೆಯನ್ನು ಪಾವತಿಸಬೇಕು. ಇಂತಹ ವರ್ತಕರು ತಕ್ಷಣ ನೋಂದಣಿ ಪಡೆಯಬೇಕು. ವಾರ್ಷಿಕ ವಹಿವಾಟು 1.5 ಕೋಟಿ ರೂ.ಗಳಿಗಿಂತ ಕಡಿಮೆ ಇರುವ ಸಣ್ಣ ವರ್ತಕರು ರಾಜಿ ತೆರಿಗೆಯನ್ನು ಆಯ್ಕೆ ಮಾಡಿ, ಇನ್ನು ಮುಂದೆ ಶೇ.1ರಷ್ಟು ತೆರಿಗೆ ಪಾವತಿಸಬಹುದಾಗಿದೆ ಎಂದು ವಾಣಿಜ್ಯ ಇಲಾಖೆ ತಿಳಿಸಿದೆ.
ಈ ಜಿಎಸ್‍ಟಿ ಕಂಪೋಸಿಶನ್ ಸ್ಕೀಮ್ ಅಡಿಯಲ್ಲಿ ವಾರ್ಷಿಕ 1.50 ಕೋಟಿ ರೂಪಾಯಿ ತನಕ ವಹಿವಾಟು ನಡೆಸುವ ವ್ಯಾಪಾರಿಗಳು ಒಟ್ಟು ಶೇ.1ರಷ್ಟು ಜಿಎಸ್‍ಟಿ ಪಾವತಿಸಿದರೆ ಸಾಕಾಗುತ್ತದೆ. ಉದಾಹರಣೆಗೆ ಸಣ್ಣ ವ್ಯಾಪಾರಿಯೊಬ್ಬ ವರ್ಷಕ್ಕೆ 1.50 ಕೋಟಿ ರೂ.ಗಳಷ್ಟು ವ್ಯಾಪಾರ ಮಾಡಿದರೆ, 1.50 ಲಕ್ಷ ರೂಪಾಯಿ ಜಿಎಸ್‍ಟಿ ಕಟ್ಟಿದರೆ ಸಾಕು ಎಂದು ವಾಣಿಜ್ಯ ಇಲಾಖೆಯು ವಿವರಿಸಿದೆ.