ಜು.1ರಿಂದ ಆರೋಗ್ಯ ಇಲಾಖೆ ಸಿಬ್ಬಂದಿಗೆ ಮೊಬೈಲ್ ಆಧಾರಿತ ಹಾಜರಾತಿ ಜಾರಿ
ಸಾಂದರ್ಭಿಕ ಚಿತ್ರ | PC : Meta AI
ಬೆಂಗಳೂರು : ರಾಜ್ಯದ ಎಲ್ಲ ಆರೋಗ್ಯ ಸಂಸ್ಥೆಗಳನ್ನು ಒಳಗೊಂಡಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಗಳಿಗೆ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಜು.1ರಿಂದ ಜಾರಿ ಮಾಡಲಾಗುತ್ತಿದೆ ಎಂದು ರಾಜ್ಯ ಸರಕಾರವು ಆದೇಶ ಹೊರಡಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಮೊಬೈಲ್ ತಂತ್ರಾಂಶದ ಮೂಲಕ ಹಾಜರಾತಿ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಪ್ರಸಕ್ತ ಬಜೆಟ್‍ನಲ್ಲಿ ಘೋಷಿಸಲಾಗಿದೆ. ಅದರಂತೆ ರಾಜ್ಯದ ಎಲ್ಲ 12 ಸಾವಿರ ಆರೋಗ್ಯ ಸಂಸ್ಥೆಗಳನ್ನು ಒಳಗೊಂಡು ಇಲಾಖೆಯಾದ್ಯಂತ ಕರ್ನಾಟಕ ಹಾಜರಾತಿ ನಿರ್ವಹಣಾ ವ್ಯವಸ್ಥೆಯನ್ನು(ಕೆಎಎಂಎಸ್) ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದೆ.
ಈ ವ್ಯವಸ್ಥೆಯು ಆಧಾರ್ ಆಧಾರಿತ ಮುಖ ಪ್ರಮಾಣೀಕರಣ, ಭೌಗೋಳಿಕ ನಿರ್ದಿಷ್ಠಾಂಕಗಳೊಳಗೆ(ಜಿಪಿಎಸ್) ಕ್ಷೇತ್ರದಲ್ಲಿ ಹಾಜರಾತಿ ಗುರುತಿಸಲು ನೆರವಾಗುತ್ತದೆ. ಮೊಬೈಲ್ ಆಧಾರಿತ ಹಾಜರಾತಿಗೆ ಹಾರ್ಡ್‍ವೇರ್‌ನ ಅಗತ್ಯ ಇರುವುದಿಲ್ಲ. ಹಾಗೆಯೇ ಕಾರ್ಯಾಚರಣೆಯ ವೆಚ್ಚಗಳನ್ನು ಕಡಿಮೆ ಮಾಡಲಿದೆ. ಹಾಜರಾತಿ ಮೇಲ್ವಿಚಾರಣೆ ಮತ್ತು ಕಾರ್ಯಬಲ ನಿರ್ವಹಣೆಯನ್ನು ಸುಧಾರಿಸಲಿದೆ ಎಂದು ಆದೇಶದಲ್ಲಿ ತಿಳಿಸಿದೆ.
‘ಪಾರದರ್ಶಕ ವ್ಯವಸ್ಥೆಯನ್ನು ಜಾರಿ ಮಾಡಲು ರಾಜ್ಯದ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಸೇರಿದಂತೆ ಸಿಬ್ಬಂದಿಗಳಿಗೆ ಮೊಬೈಲ್ ಹಾಜರಾತಿ ಕಡ್ಡಾಯಗೊಳಿಸಲಾಗುತ್ತಿದೆ. ಜು.1ರಿಂದ ಮೊಬೈಲ್ ಹಾಜರಾತಿ ಜಾರಿಗೆ ಬರಲಿದೆ. ನೂತನ ಹಾಜರಾತಿ ವ್ಯವಸ್ಥೆಗೆ ಆರೋಗ್ಯ ಇಲಾಖೆ ಅಧಿಕಾರಿ, ನೌಕರರು ಸಹಕರಿಸುವಂತೆ ಮನವಿ ಮಾಡಲಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸಿಗುವುದಿಲ್ಲ ಎಂಬ ಸಾರ್ವಜನಿಕರ ದೂರುಗಳು ಇನ್ನು ಮುಂದೆ ಕಡಿಮೆಯಾಗಲಿವೆ ಎಂಬ ನಿರೀಕ್ಷೆ ನನಗಿದೆ’
-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ