×
Ad

10 ರಿಂದ 15 ಮಂದಿ ಹಾಲಿ, ಮಾಜಿ ಶಾಸಕರು ಕಾಂಗ್ರೆಸ್ ಗೆ ಸೇರಲು ಸಿದ್ಧರಿದ್ದಾರೆ: ಸಚಿವ ಚಲುವರಾಯಸ್ವಾಮಿ

Update: 2023-08-18 20:33 IST

ಮೈಸೂರು,ಆ.18: ʼರಾಜ್ಯದ 10 ರಿಂದ 15 ಮಂದಿ ಹಾಲಿ ಹಾಗೂ ಮಾಜಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರಲು ಸಿದ್ದರಿದ್ದಾರೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆʼ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಎಲ್ಲರ ಜೊತೆಯೂ ಮಾತುಕತೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಎಲ್ಲವೂ ಕೂಡ ಅಂತಿಮವಾಗಲಿದೆ. ಯಾರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೋ ಅವರ ಹೆಸರನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಹಾಲಿ-ಮಾಜಿ ಶಾಸಕರು ನಮ್ಮ ಪಕ್ಷಕ್ಕೆ ಬರುವುದು ಖಚಿತ ಎಂದು ತಿಳಿಸಿದರು.

ಗುತ್ತಿಗೆದಾರರಿಂದ ಸಚಿವರು ಹಣ ವಸೂಲಿ ಮಾಡುತ್ತಿದ್ದಾರೆಂಬ ಆರೋಪ ಕುರಿತು ಪ್ರಶ್ನೆ ಕೇಳುತ್ತಿದ್ದಂತೆ, ʼʼಅಯ್ಯೋ ಬಿಡಪ್ಪಾ, ಕೆಲಸ ಇಲ್ಲದವರು ಇದನ್ನೆಲ್ಲಾ ಮಾತನಾಡೋದು. ಹಿಂದಿನ ಸರ್ಕಾರದ ಅವಧಿಯಲ್ಲಿ ಒಂದು ವರ್ಷ ಪೇಮೆಂಟ್ ಕೊಟ್ಟಿರಲಿಲ್ಲ. ನಾವು ಬಂದು ಕೇವಲ ಎರಡೂವರೆ ತಿಂಗಳಾಗಿದೆ. ಅನುದಾನವನ್ನು ಒಂದೇ ಸಲ ಎಷ್ಟು ಅಂತಾ ಕೋಡೋಕೆ ಆಗುತ್ತದೆ. ಕೆಲವರು ಬಾಯಿ ಚಪಲಕ್ಕೆ ಏನೇನೋ ಮಾತನಾಡುತ್ತಾರೆ. ಅವರಿಗೆಲ್ಲಾ ಉತ್ತರ ಕೋಡೋಕೆ ಆಗುತ್ತಾʼʼ ಎಂದು ಹೇಳಿದರು.

ರಾಜ್ಯದಲ್ಲಿ ಬರ ಘೋಷಣೆ ಮಾಡುವ ವಿಚಾರ ಕುರಿತು ಪ್ರತಿಕ್ರಿಯಿಸಿ, ʼʼಈ ಬಗ್ಗೆ ಸಭೆ ನಡೆಸಿದ್ದೇವೆ.ಜೂನ್ ಮತ್ತು ಆಗಸ್ಟ್ ನಲ್ಲಿ ಮಳೆ ಕೊರತೆಯಾಗಿದೆ. ಶೇಕಡ 60ರಷ್ಟು ಬರ ಇದ್ದರೆ ಮಾತ್ರ ಕೇಂದ್ರ ಅನುದಾನ ಬಿಡುಗಡೆ ಮಾಡುತ್ತದೆ. ಇದನ್ನು 30% ಗೆ ಇಳಿಸುವಂತೆ ಕೇಂದ್ರಕ್ಕೆ ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆ. ಆ ಪತ್ರಕ್ಕೆ ಕೇಂದ್ರದಿಂದ ಉತ್ತರ ಬಂದಿಲ್ಲ. ಇದರಿಂದ ವಿಶೇಷ ಅನುದಾನವನ್ನು ಕೇಂದ್ರದಿಂದ ಕೇಳಿಲ್ಲ. 30%ಕ್ಕೆ ಇಳಿಸುವ ಬಗ್ಗೆ ಉತ್ತರ ಬಂದ ನಂತರ ಸಭೆ ನಡೆಸಿ ತೀರ್ಮಾನ ಮಾಡಲಾಗುತ್ತದೆ. ಕಮಿಟಿ ಮೀಟಿಂಗ್ ನಲ್ಲಿ ಬರ, ನೀರಿನ ಪರಿಸ್ಥಿತಿಯ ವರದಿಯನ್ನ ಅಧಿಕಾರಿಗಳ ಬಳಿ ಕೇಳಿದ್ದೇವೆʼʼ ಎಂದು ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News