×
Ad

‘ಶಕ್ತಿʼ ಯೋಜನೆಗೆ 100 ದಿನ | 64 ಕೋಟಿ ಮಹಿಳೆಯರ ಉಚಿತ ಪ್ರಯಾಣ: ಹರ್ಷ ವ್ಯಕ್ತಪಡಿಸಿದ ಸಿಎಂ

Update: 2023-09-21 18:04 IST

ಬಸ್ಸಿನ ಮೆಟ್ಟಿಲುಗಳಿಗೆ ನಮಸ್ಕರಿಸಿದ್ದ ಸಂಗವ್ವರ ಜೊತೆ  ಸಿದ್ದರಾಮಯ್ಯ

ಬೆಂಗಳೂರು, ಸೆ. 21: ‘ಶಕ್ತಿ’ ಯೋಜನೆ ಜಾರಿಗೊಂಡ ನೂರು ದಿನಗಳ ಅವಧಿಯಲ್ಲಿ ನಾಡಿನ ಹೆಣ್ಣು ಮಕ್ಕಳಿಂದ ದೊರೆಯುತ್ತಿರುವ ಸ್ಪಂದನೆ ನಮ್ಮ ನಿರೀಕ್ಷೆಗೂ ಮೀರಿದ್ದು. ಈ ವರೆಗೆ ಒಟ್ಟು 64 ಕೋಟಿ ಮಹಿಳೆಯರು(ಪ್ರಯಾಣ ಸಂಖ್ಯೆ) ಉಚಿತ ಪ್ರಯಾಣ ಸೌಲಭ್ಯದ ಸದುಪಯೋಗ ಪಡೆದಿದ್ದು, ಇದಕ್ಕಾಗಿ ಸರಕಾರವು 1,472 ಕೋಟಿ ರೂಪಾಯಿ ವೆಚ್ಚ ಮಾಡಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಕಿ-ಅಂಶಗಳನ್ನು ನೀಡಿದ್ದಾರೆ.

ಗುರುವಾರ ಎಕ್ಸ್‌ ನಲ್ಲಿ ಈ ಕುರಿತು ಬರೆದುಕೊಂಡಿರುವ ಸಿದ್ದರಾಮಯ್ಯ, ‘ಶಿಕ್ಷಣ, ಉದ್ಯೋಗ, ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಜನರ ನಿತ್ಯಬದುಕಿನ ಅವಶ್ಯಕತೆಗಳಿಗಾಗಿ ಪ್ರಯಾಣ ಬೆಳೆಸುವ ಹೆಣ್ಣು ಮಕ್ಕಳಿಗೆ ಈ ಯೋಜನೆ ವರದಾನ. ಉಜ್ವಲ ಭವಿಷ್ಯದ ಕನಸು ಕಟ್ಟಿಕೊಂಡು ಶಾಲೆಗೆ ಹೋಗುವ ಪ್ರತಿ ಹೆಣ್ಣುಮಗಳು, ಕುಟುಂಬದ ಹೊಣೆಯನ್ನು ತನ್ನ ಹೆಗಲ ಮೇಲೆ ಹೊತ್ತು ನಿತ್ಯ ದುಡಿಮೆಗೆ ತೆರಳುವ ನಾಡಿನ ಅಕ್ಕ-ತಂಗಿಯರು, ವೈದ್ಯಕೀಯ ಚಿಕಿತ್ಸೆಗಾಗಿ ಪ್ರಯಾಣ ಬೆಳೆಸುವ ಬಡತಾಯಂದಿರ ಬದುಕಿನ ಬವಣೆ ನಮ್ಮ ಶಕ್ತಿ ಯೋಜನೆಯ ಹಿಂದಿರುವ ಪ್ರೇರಕ ಶಕ್ತಿ’ ಎಂದು ತಿಳಿಸಿದ್ದಾರೆ.

‘ಹೆಣ್ಣು ಮಕ್ಕಳು ನಾಲ್ಕು ಗೋಡೆಗಳಿಗೆ ಸೀಮಿತವಾಗದೆ ಅವಕಾಶಗಳ ಜಗತ್ತಿನಲ್ಲಿ ತಮ್ಮನ್ನು ತೊಡಗಿಸಿಕೊಂಡು, ತಾವು ಸದೃಢರಾಗುವ ಜೊತೆಗೆ ಬಲಿಷ್ಠ ಸಮಾಜದ ಆಧಾರ ಸ್ತಂಭಗಳಾಗಬೇಕು ಎಂಬ ನಮ್ಮ ಉದ್ದೇಶವನ್ನು ಈಡೇರಿಸುವ ದಿಕ್ಕಿನಲ್ಲಿ ಶಕ್ತಿ ಯೋಜನೆ ಮುಂದಡಿಯಿಡುತ್ತಿದೆ. ಶಕ್ತಿ ಯೋಜನೆ ಜಾರಿಗೊಂಡ ಈ ನೂರು ದಿನಗಳಲ್ಲಿ ಅಸಂಖ್ಯ ತಾಯಂದಿರಲ್ಲಿ ನೆಮ್ಮದಿಯ ನಿಟ್ಟುಸಿರಿಗೆ, ಲಕ್ಷಾಂತರ ವಿದ್ಯಾರ್ಥಿನಿಯರ ಮುಖದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ ಎಂಬುದು ಯೋಜನೆ ಜಾರಿಗೆ ಕೊಟ್ಟ ನನಗೆ ಅತ್ಯಂತ ಖುಷಿಯ ಸಂಗತಿ’ ಎಂದು ಅವರು ಬಣ್ಣಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News