×
Ad

ಬೊಕ್ಕಸ ಬರಿದಾಗಿರುವುದರಿಂದ 11 ಲಕ್ಷ ಬಿಪಿಎಲ್ ಕಾರ್ಡ್ ರದ್ದು: ಬಿ.ವೈ. ವಿಜಯೇಂದ್ರ ಆರೋಪ

Update: 2024-11-18 19:15 IST

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

ಬೆಂಗಳೂರು, ನ.18: ಗ್ಯಾರಂಟಿಗಳಿಗೆ ಹಣ ಹೊಂದಿಸಲಾಗದೇ, ಭ್ರಷ್ಟಾಚಾರದಲ್ಲಿ ಮುಳುಗಿ ಬೊಕ್ಕಸ ಬರಿದಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ 11 ಲಕ್ಷ ಬಿಪಿಎಲ್ ಪಡಿತರ ಚೀಟಿಗಳನ್ನೇ ರದ್ದು ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

ಈ ಸಂಬಂಧ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕೆ ಹೋಗಿ ನಾವು ಗ್ಯಾರಂಟಿ ಜಾರಿ ಮಾಡಿದ್ದೇವೆ ಎಂದು ಆರ್ಭಟಿಸುವ ಸಿದ್ದರಾಮಯ್ಯನವರು ಪ್ರಚಾರ ಭಾಷಣ ಮುಗಿಸಿ ಮರಳುವ ಹೊತ್ತಿಗೆ ಅನರ್ಹ ಮಾನದಂಡ ಮುಂದಿಟ್ಟು 11 ಲಕ್ಷ ಜನರ ಬಿಪಿಎಲ್ ಕಾರ್ಡ್ ರದ್ದು ಮಾಡುವ ತಂತ್ರ ಕುತಂತ್ರಗಳು ದೇಶದ ಮುಂದೆ ಬಟಾ ಬಯಲಾಗುತ್ತಿದೆ ಎಂದು ಟೀಕಿಸಿದ್ದಾರೆ.

ಅನರ್ಹತೆ ಹೆಸರಿನಲ್ಲಿ ನಿಜವಾದ ಬಿಪಿಎಲ್ ಕಾರ್ಡುದಾರರ ಹಕ್ಕನ್ನು ಕಿತ್ತುಕೊಳ್ಳುವುದನ್ನು ರಾಜ್ಯ ಬಿಜೆಪಿ ಖಂಡಿಸುತ್ತದೆ. ಅನರ್ಹರನ್ನು ತಡೆಯುವ ಹೆಸರಿನಲ್ಲಿ ಬಿಪಿಎಲ್ ಕಾರ್ಡುದಾರರನ್ನು ಇಳಿಮುಖಗೊಳಿಸಿ ಭಾಗ್ಯ ಯೋಜನೆಗಳಿಗೆ ಹಣ ಹೊಂದಿಸುವ ದುರುದ್ದೇಶ ಈ ಬಿಪಿಎಲ್ ಕಾರ್ಡುದಾರರ ರದ್ದತಿಯ ಹಿಂದೆ ಅಡಗಿದೆ ಎಂಬುದು ರಾಜ್ಯ ಸರಕಾರದ ನೀತಿ ನಿಲುವುಗಳಿಂದ ವೇದ್ಯವಾಗುತ್ತಿದೆ ಎಂದು ವಿಜಯೇಂದ್ರ ದೂರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News