×
Ad

‘ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3’| 1.33 ಲಕ್ಷ ಎಕರೆ ಭೂಮಿ ಸ್ವಾಧೀನ: ಡಿ.ಕೆ.ಶಿವಕುಮಾರ್

Update: 2025-09-16 20:35 IST

Photo:X/@DKShivakumar

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಈ ಯೋಜನೆಗೆ 1,33,867 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಾಗಿದ್ದು, ಈ ಪೈಕಿ 75,563 ಎಕರೆ ಮುಳುಗಡೆ ಯಾಗಲಿದ್ದು, ಕಾಲುವೆಗಾಗಿ 51,837 ಎಕರೆ, ಪುನಶ್ಚೇತನ ಕಾರ್ಯಕ್ಕೆ 6,467 ಎಕರೆ ಜಮೀನು ಬೇಕಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಮಂಗಳವಾರ ವಿಧಾನಸೌಧದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಈ ಯೋಜನೆಗೆ ಅಗತ್ಯವಿರುವ ಭೂಮಿಯನ್ನು 2013ರ ಭೂಸ್ವಾಧೀನ ಕಾಯ್ದೆ ಅನ್ವಯ ಸ್ವಾಧೀನಪಡಿಸಿಕೊಳ್ಳಲಾಗುವುದು. ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಅನೇಕ ಪ್ರಕರಣಗಳು ವಿಚಾರಣೆ ನಡೆಯುತ್ತಿದೆ. ಸುಮಾರು 20 ಸಾವಿರ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿವೆ ಎಂದು ಅವರು ಹೇಳಿದರು.

ಈ ಕಾಯ್ದೆಯಲ್ಲಿ ನೀಡಲಾಗಿರುವ ಅವಕಾಶದ ಪ್ರಕಾರ ಈ ಪ್ರಕರಣಗಳನ್ನು ರಾಜಿ ಸಂಧಾನ ಕಾನೂನು ಪ್ರಕಾರ ಇತ್ಯರ್ಥ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣವಿಲ್ಲದ ಜಮೀನುಗಳನ್ನು ರೈತರಿಂದ ನೇರವಾಗಿ ಖರೀದಿ ಮಾಡಲಾಗುವುದು ಎಂದು ಶಿವಕುಮಾರ್ ಮಾಹಿತಿ ನೀಡಿದರು.

ಪುನಶ್ಚೇತನ ಕಾರ್ಯಕ್ಕೆ ಸಂಬಂಧಿಸಿದಂತೆ ಪ್ರಮುಖ ಪ್ರಕರಣಗಳಿರುವ ಕಾರಣ, ನಾವು ಈ ವಿಚಾರದಲ್ಲಿ ಹೊಸ ನೀತಿ ರೂಪಿಸಲು ತೀರ್ಮಾನಿಸಿದ್ದೇವೆ. ಈ ವಿಚಾರವಾಗಿ ಸ್ಥಳೀಯ ನಾಯಕರು, ರೈತರ ಅಭಿಪ್ರಾಯ ಪಡೆಯಲಾಗುವುದು. ನ್ಯಾಯಯುತ ಪರಿಹಾರ, ಭೂಸ್ವಾಧೀನ ಪಾರದರ್ಶಕತೆ ಹಕ್ಕು ಕಾಯ್ದೆಯ ಸೆಕ್ಷನ್ 51ರ ಅಡಿಯಲ್ಲಿ ಭೂಸ್ವಾಧೀನ, ಪುನಶ್ಚೇತನ ಹಾಗೂ ಪರಿಹಾರ ಪ್ರಾಧಿಕಾರ ರಚಿಸಲು ಅವಕಾಶವಿದೆ ಎಂದು ಅವರು ನುಡಿದರು.

ಹೀಗಾಗಿ ರಾಜ್ಯ ಸರಕಾರ ಮೊದಲ ಬಾರಿಗೆ ಈ ಪ್ರಾಧಿಕಾರವನ್ನು ರಚಿಸಲಿದೆ. ಮುಖ್ಯ ನ್ಯಾಯಮೂರ್ತಿಗಳು ನೇಮಕ ಮಾಡುವ ನ್ಯಾಯಾಧೀಶರ ನೇತೃತ್ವದಲ್ಲಿ ಪುನಶ್ಚೇತನ ಹಾಗೂ ಪರಿಹಾರ ಪ್ರಾಧಿಕಾರವನ್ನು ರಚಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

ರೈತರ ಬದುಕಿಗೆ ಹೊಸ ರೂಪ ನೀಡಿ, ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದು ನಮ್ಮ ಸರಕಾರದ ಸಂಕಲ್ಪ. ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆ ಜಾರಿಗೆ ಸಂಬಂಧಿಸಿದಂತೆ ಇಂದು ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ನೀರಾವರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಇತಿಹಾಸದಲ್ಲೇ ಮಹತ್ತರ ತೀರ್ಮಾನ ಕೈಗೊಂಡಿದೆ ಎಂದು ಅವರು ಹೇಳಿದರು.

2020ರ ಡಿ.30ರಂದು ಕೃಷ್ಣಾ ನೀರು ವಿವಾದ ನ್ಯಾಯಾಧೀಕರಣದಲ್ಲಿ ಕರ್ನಾಟಕ ರಾಜ್ಯಕ್ಕೆ ತನ್ನ ಪಾಲಿನ ನೀರು ಹಂಚಿಕೆಯಾಗಿದ್ದು, ಇದರ ಅಂತಿಮ ವರದಿ 2013ರ ನ.29ರಂದು ನೀಡಲಾಗಿತ್ತು. ಆದರೂ ಇವತ್ತಿನವರೆಗೂ ಕೇಂದ್ರ ಸರಕಾರ ಈ ವಿಚಾರವಾಗಿ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ ಎಂದು ಶಿವಕುಮಾರ್ ತಿಳಿಸಿದರು.

ರಾಜಕೀಯ ಒತ್ತಡಗಳಿಂದ 2 ಬಾರಿ ಸಭೆ ಮುಂದೂಡಿಕೆ:

ಕರ್ನಾಟಕ ತನ್ನ ಪಾಲಿನ ನೀರನ್ನು ಪಡೆಯಲು ನಾನು ಹಾಗೂ ಮುಖ್ಯಮಂತ್ರಿ ಹಲವು ಬಾರಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಈ ವಿಚಾರವಾಗಿ ಮನವಿ ಮಾಡಿದ್ದೇವೆ. ನಮ್ಮ ಮನವಿಗೆ ಸ್ಪಂದಿಸಿರುವ ಕೇಂದ್ರ ಸಚಿವರು ಅಧಿಸೂಚನೆ ಹೊರಡಿಸಲು ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದು ಅವರು ಹೇಳಿದರು.

ಕೇಂದ್ರ ಸಚಿವರು ಈ ವಿಚಾರವಾಗಿ ಎರಡು ಬಾರಿ ಸಭೆ ನಿಗದಿ ಮಾಡಿದ್ದರು. ರಾಜಕೀಯ ಒತ್ತಡಗಳಿಂದಾಗಿ ಈ ಸಭೆ ಮುಂದೂಡಲಾಗಿತ್ತು. ಒಂದು ಬಾರಿ ಮಹಾರಾಷ್ಟ್ರ ಹಾಗೂ ಮತ್ತೊಂದು ಬಾರಿ ಆಂಧ್ರ ಪ್ರದೇಶದ ಒತ್ತಡದಿಂದ ಸಭೆ ಮುಂದೂಡಲಾಗಿದೆ. ಈ ವಿಚಾರದಲ್ಲಿ ಆತಂಕ ಪಡುವ ಅಗತ್ಯವಿಲ್ಲ. ಮತ್ತೊಂದು ದಿನಾಂಕ ನಿಗದಿ ಮಾಡಿ ಸಭೆ ಮಾಡೋಣ ಎಂದು ಕೇಂದ್ರ ಸಚಿವರು ಪತ್ರ ಬರೆದಿದ್ದಾರೆ. ಹೀಗಾಗಿ ನಾವು ಯೋಜನೆ ಜಾರಿಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಶಿವಕುಮಾರ್ ಹೇಳಿದರು.

ಮಹಾರಾಷ್ಟ್ರ ವಿರುದ್ಧ ಪ್ರತ್ಯೇಕ ಹೋರಾಟ:

ಮಹಾರಾಷ್ಟ್ರ ಮುಖ್ಯಮಂತ್ರಿ ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳವನ್ನು ವಿರೋಧಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದ್ದಾರೆ. ಈ ವಿಚಾರವಾಗಿ ನಾವು ಪ್ರತ್ಯೇಕವಾಗಿ ಹೋರಾಟ ಮಾಡುತ್ತೇವೆ. ಅದರ ಬಗ್ಗೆ ಸಧ್ಯಕ್ಕೆ ಚರ್ಚೆ ಮಾಡುವುದಿಲ್ಲ. ಈಗ ಬಂದಿರುವ ತೀರ್ಪಿನ ಪ್ರಕಾರ ನಮ್ಮ ಪಾಲಿನ ನೀರನ್ನು ಪಡೆಯುವುದು ನಮ್ಮ ಹಕ್ಕು. ನಮ್ಮ ರಾಜ್ಯದ ರೈತರ ಹಿತರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಎಂದು ಅವರು ಹೇಳಿದರು.

ಈ ಪ್ರಕರಣದಲ್ಲಿ ನ್ಯಾಯಾಧೀಕರಣದ ತೀರ್ಪು ಹೊರಬಂದಿದೆ. ಮಹಾರಾಷ್ಟ್ರ ಮುಖ್ಯಮಂತ್ರಿಗೆ ಬೇರೆ ಆಯ್ಕೆ ಇಲ್ಲ. ಈ ಹಿಂದೆ ಮಹಾರಾಷ್ಟ್ರ ಈ ಯೋಜನೆಗೆ ಒಪ್ಪಿಗೆ ನೀಡಿತ್ತು. ತೆಲಂಗಾಣ ಹಾಗೂ ಆಂಧ್ರಪ್ರದೇಶ ಈ ವಿಚಾರದಲ್ಲಿ ಒಪ್ಪಿಗೆ ನೀಡುವ ವಿಶ್ವಾಸವಿದೆ. ಈ ಯೋಜನೆಯಿಂದ ಎಲ್ಲ ರಾಜ್ಯಗಳ ರೈತರಿಗೂ ಪ್ರಯೋಜನವಾಗಲಿದೆ. ಈ ವಿಚಾರದಲ್ಲಿ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸುವುದೊಂದೇ ಬಾಕಿ ಇದೆ ಎಂದು ಶಿವಕುಮಾರ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News