×
Ad

ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ.15ರಷ್ಟು ಮೀಸಲಾತಿ : ಸಚಿವ ಸಂಪುಟ ನಿರ್ಧಾರ

Update: 2025-06-19 17:40 IST

ಬೆಂಗಳೂರು : ರಾಜ್ಯ ಸರಕಾರದ ವಸತಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುವ ವಿವಿಧ ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ(ಮುಸ್ಲಿಮ್, ಕ್ರೈಸ್ತ, ಜೈನ, ಸಿಖ್, ಬೌದ್ಧ ಹಾಗೂ ಪಾರ್ಸಿ) ಪ್ರಸಕ್ತ ನೀಡುತ್ತಿರುವ ವಸತಿ ಹಂಚಿಕೆಯಲ್ಲಿನ ಮೀಸಲಾತಿ ಪ್ರಮಾಣವನ್ನು ಶೇ.10ರಿಂದ ಶೇ.15ಕ್ಕೆ ಹೆಚ್ಚಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಕೇಂದ್ರ ಸರಕಾರವು ಸಾಚಾರ್ ಸಮಿತಿಯ ವರದಿಯನ್ನು ಪರಿಗಣಿಸಿ ಅಲ್ಪಸಂಖ್ಯಾತರಲ್ಲಿನ ವಸತಿ ರಹಿತರ ಪ್ರಮಾಣವನ್ನು ಗಮನಿಸಿ ಕೆಲವು ಸೂಚನೆಗಳನ್ನು ನೀಡಿದೆ. ಸಾಮಾಜಿಕ ನ್ಯಾಯವನ್ನು ಗಮನದಲ್ಲಿರಿಸಿಕೊಂಡು ನಮ್ಮ ಸರಕಾರ ವಸತಿ ಹಂಚಿಕೆಯಲ್ಲಿನ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ ಎಂದು ಹೇಳಿದರು.

ಇದಕ್ಕಾಗಿ ಪ್ರತ್ಯೇಕವಾಗಿ ನಿಯಮಾವಳಿಗಳನ್ನು ರೂಪಿಸುವ ಅಥವಾ ಕಾನೂನು ತರುವ ಅಗತ್ಯವಿಲ್ಲ. ಸರಕಾರದ ಈ ನಿರ್ಧಾರವು ರಾಜ್ಯದಲ್ಲಿನ ಎಲ್ಲ ಅಲ್ಪಸಂಖ್ಯಾತರಿಗೂ ಅನ್ವಯವಾಗುತ್ತದೆ. ಅದರಲ್ಲಿ ಮುಸ್ಲಿಮರು, ಕ್ರೈಸ್ತರು, ಜೈನರು ಎಲ್ಲರೂ ಒಳಗೊಳ್ಳುತ್ತಾರೆ. ಈ ನಿರ್ಧಾರ ಕೈಗೊಳ್ಳಲು ಬೇಕಾದ ಹಲವು ಅಧ್ಯಯನ ವರದಿಗಳೂ ಇವೆ. ಬಡವರಿಗೆ ಮನೆ ಮಾಡಿಕೊಡುವುದರಲ್ಲಿ ರಾಜಕೀಯ ವಾಸನೆ ಹುಡುಕುವವರಿಗೆ ನಾವು ಉತ್ತರ ಕೊಡಲು ಆಗಲ್ಲ. ವಸತಿ ಹೀನರಿಗೆ ಹೆಚ್ಚಿನ ಸೌಲಭ್ಯಗಳನ್ನು ಕೊಡಬೇಕು ಎಂಬುದು ಸರಕಾರದ ಸದುದ್ದೇಶ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News