×
Ad

ಚುನಾವಣಾ ಫಲಿತಾಂಶಕ್ಕೆ 2 ತಿಂಗಳು, 13 ನೇ ದಿನಕ್ಕೆ ಕಾಲಿಟ್ಟ ಅಧಿವೇಶನ: ಇನ್ನೂ ವಿಪಕ್ಷ ನಾಯಕನ 'ಗ್ಯಾರಂಟಿ' ಇಲ್ಲ!

Update: 2023-07-14 10:47 IST

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದು ಗುರುವಾರಕ್ಕೆ 2 ತಿಂಗಳಾಗಿದೆ. ಅಧಿವೇಶನ ಆರಂಭವಾಗಿ ಇಂದಿಗೆ (ಶುಕ್ರವಾರ) 13 ದಿನ ಆಗುತ್ತಿದೆ, ಬಜೆಟ್‌ ಕೂಡ ಮಂಡನೆಯಾಗಿದೆ. ಆದರೆ ಬಿಜೆಪಿಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಬಗ್ಗೆ ಸುಳಿವೇ ಇಲ್ಲದಂತಾಗಿದೆ.

ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಶೀಘ್ರ ನೇಮಕವಾಗಲಿದೆ, ಅಚ್ಚರಿಯ ಹೆಸರು ಘೋಷಣೆಯಾಗಲಿದೆ ಎಂಬ ಹೇಳಿಕೆಯನ್ನೇ ಮತ್ತೆ ಮತ್ತೆ ಹೇಳಿ ಸಾಗ ಹಾಕುತ್ತಿದ್ದಾರೆ. ವಿಧಾನ ಸಭೆಯಲ್ಲಿ ಈ ವಿಚಾರ ಬಂದಾಗ ವಿಪಕ್ಷ ಸದಸ್ಯರು ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ರೇಸ್ ನಲ್ಲಿ ಯಾರ್ಯಾರು?

ಮಾಜಿ ಸಿಎಂ ಬೊಮ್ಮಾಯಿ ಹಾಗೂ ಬಸನಗೌಡ ಯತ್ನಾಳ್ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ. ಉಳಿದಂತೆ ಅಶ್ವತ್ಥ್ ‌ನಾರಾಯಣ್ ಮತ್ತು ಆರ್.ಅಶೋಕ್, ಸುನಿಲ್ ಕುಮಾರ್, ಸುರೇಶ್ ಕುಮಾರ್,  ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೆಸರುಗಳು ಕೇಳಿ ಬರುತ್ತಿವೆ.

 

ಬೊಮ್ಮಾಯಿ ವಿಪಕ್ಷ ನಾಯಕನಾಗಲಿ ಎಂದ ಸಿಎಂ!

ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಮಾತನಾಡುತ್ತಾ, ,'ಬಸವರಾಜ ಬೊಮ್ಮಾಯಿ ವಿರೋಧ ಪಕ್ಷದ ನಾಯಕರಾಗಲಿ ಎಂದು ಆಶಿಸುತ್ತೇನೆ. ಆದರೆ, ಇಷ್ಟು ದಿನವಾದರೂ ವಿರೋಧ ಪಕ್ಷದ ನಾಯಕನ ನೇಮಕ ಮಾಡಲಿಲ್ಲ. ಅಧಿವೇಶನ ಆರಂಭವಾಗಿ 12 ದಿನ ಆಗುತ್ತಿದೆ. ರಾಜ್ಯದ ಇತಿಹಾಸದಲ್ಲಿ ಎಂದೂ ಹೀಗೆ ಆಗಿರಲಿಲ್ಲ. ಯಾಕೆ ನಿಮ್ಮ ಮೇಲೆ ವಿಶ್ವಾಸವಿಲ್ಲವೋ, ಅಥವಾ ಬೇರೆಯಾರಾದರೂ ಆ ಸ್ಥಾನಕ್ಕೆ ಬರುತ್ತಾರೋ', ಎಂದು ಪ್ರಶ್ನೆ ಮಾಡಿದ್ದಾರೆ. 

 

 

ಕುಮಾರಸ್ವಾಮಿ ಅವರೇ ವಿರೋಧ ಪಕ್ಷದ ನಾಯಕ ಆಗ್ತಾರೆ ಎಂದ ಸವದಿ!

ಬುಧವಾರ ವಿಧಾನಸಭೆಯಲ್ಲಿ ಮಾಜಿ ಸಚಿವ ಲಕ್ಷ್ಮಣ ಸವದಿ ಮಾತನಾಡುತ್ತಾ, 'ವಿರೋಧ ಪಕ್ಷದ ನಾಯಕ ಸ್ಥಾನ ಜೆಡಿಎಸ್ ಮನೆ ಬಾಗಿಲಿಗೆ ಬರುತ್ತದೆ. ಆ ಸ್ಥಾನಕ್ಕಾಗಿ ಬಹಳ ಕಚ್ಚಾಡ್ತಾ ಇದ್ದಾರೆ ಆದರೆ ಪ್ರಯೋಜನ ಇಲ್ಲ. ಕುಮಾರಸ್ವಾಮಿ ಅವರು ಮಾತ್ರ ವಿರೋಧ ಪಕ್ಷದಲ್ಲಿ ಕೂತು ಕೆಲಸ ಮಾಡ್ತಾ ಇದ್ದಾರೆ. ಅದಕ್ಕಾಗಿಯೇ ಇನ್ನೂ ಆಯ್ಕೆ ಮಾಡಿಲ್ಲ ಅಂತ ಹೊರಗೆ ಚರ್ಚೆ ನಡೀತಾ ಇದೆ ಎಂದರು.'ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ಅವರನ್ನೇ ಅಧಿಕೃತವಾಗಿ ನಿಯೋಜನೆ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿರುವುದಾಗಿ ನನಗೆ ಹಳೆ ಪಕ್ಷ ಬಿಜೆಪಿಯ ಕೆಲವು ಸ್ನೇಹಿತರು ತಿಳಿಸಿದ್ದಾರೆ' ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. 

ನಮ್ಮ ಪ್ರಕಟನೆಗೆ ಇನ್ನೂ ಸ್ಪಂದನೆ ಸಿಕ್ಕಿಲ್ಲ: ಕಾಂಗ್ರೆಸ್ 

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ''ತುರ್ತಾಗಿ ವಿಪಕ್ಷ ನಾಯಕ ಬೇಕಾಗಿದ್ದಾರೆ ಎಂಬ ನಮ್ಮ ಪ್ರಕಟನೆಗೆ ನಿಮ್ಮಿಂದ ಇನ್ನೂ ಸ್ಪಂದನೆ ಸಿಕ್ಕಿಲ್ಲ. ನಿಮ್ಮ ಹೈಕಮಾಂಡ್ ವರಿಷ್ಠರಿಗೆ ಇನ್ನೂ ಸೂಕ್ತ ಸಂದರ್ಭ, ಸೂಕ್ತ ಸಮಯ, ಸೂಕ್ತ ಮುಹೂರ್ತ ಕೂಡಿ ಬಂದಿಲ್ಲವೇ? ಹಿನಾಯ ಸೋಲಿನ ಬಳಿಕ ಕರ್ನಾಟಕದ ಬಿಜೆಪಿಯನ್ನು ದೆಹಲಿಯ ನಾಯಕರು ಕಾಲ ಕೆಳಗಿನ ಕಸದಂತೆ ಕಾಣುತ್ತಿದ್ದಾರೆಯೇ? ಅಥವಾ ಆಂತರಿಕ ಕಲಹ ಇನ್ನೂ ಮುಗಿದಿಲ್ಲವೇ?'' ಎಂದು ಬಿಜೆಪಿಯನ್ನು ಪ್ರಶ್ನೆ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮುಹಮ್ಮದ್ ನವಾಝ್

contributor

Similar News