×
Ad

ಅದಾನಿ ಒಡೆತನದ ಯುಪಿಸಿಎಲ್ ಗೆ ದಂಡ ವಿಧಿಸಿದರೂ CPCB ಯಾವುದೇ ಕ್ರಮಕೈಗೊಂಡಿಲ್ಲ : ವರದಿ

Update: 2025-01-20 19:22 IST

Photo | Reuters

ಬೆಂಗಳೂರು: ಉಡುಪಿಯಲ್ಲಿರುವ ಅದಾನಿ ಒಡೆತನದ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 52 ಕೋಟಿ ರೂ. ದಂಡ ವಿಧಿಸಿ, ಕಾನೂನು ಪ್ರಕಾರ ಮೊತ್ತವನ್ನು ವಸೂಲಿ ಮಾಡುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಸಿಪಿಸಿಬಿ) ಆದೇಶ ನೀಡಿ ಎರಡು ವರ್ಷ ಕಳೆದರೂ, ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಆರ್ ಟಿಐ ಮಾಹಿತಿಯಲ್ಲಿ ಬಹಿರಂಗವಾಗಿದೆ ಎಂದು Deccanherald ವರದಿ ಮಾಡಿದೆ.

ನ್ಯಾಯಮೂರ್ತಿ ಕೆ.ರಾಮಕೃಷ್ಣನ್ ಮತ್ತು ಇಬ್ಬರು ತಜ್ಞ ಸದಸ್ಯರನ್ನು ಒಳಗೊಂಡ NGTಯ ದಕ್ಷಿಣ ವಲಯ ಪೀಠವು 2022ರ ಮೇ 31ರಂದು ಈ ಕುರಿತು ತೀರ್ಪನ್ನು ನೀಡಿದ್ದು, ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್(UPCL) ಷರತ್ತುಗಳು ಮತ್ತು ನಿರ್ದೇಶನಗಳನ್ನು ಉಲ್ಲಂಘನೆ ಮಾಡಿದ್ದರಿಂದ ಪರಿಸರಕ್ಕೆ ಹಾನಿಯುಂಟಾಗಿದೆ ಎಂದು 52.02 ಕೋಟಿ ರೂ. ಪರಿಹಾರವನ್ನು ಪಾವತಿಸಲು ಆದೇಶಿಸಿದೆ.

ಕಂಪನಿಯು 5 ಕೋಟಿ ರೂ. ಮಧ್ಯಂತರ ಪರಿಹಾರವನ್ನು ಪಾವತಿಸಿರುವುದನ್ನು ಗಮನಿಸಿದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಉಳಿದ ಮೊತ್ತವನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪಾವತಿಸಲು ಕಂಪೆನಿಗೆ ಮೂರು ತಿಂಗಳ ಗಡುವನ್ನು ನಿಗದಿಪಡಿಸಿದೆ. ಮೂರು ತಿಂಗಳೊಳಗೆ ಮೊತ್ತವನ್ನು ಪಾವತಿಸದಿದ್ದರೆ, ಕಾನೂನಿನ ಪ್ರಕಾರ ಯುಪಿಸಿಎಲ್‌ ನಿಂದ ಮೊತ್ತವನ್ನು ವಸೂಲಿ ಮಾಡಲು ಸಿಪಿಸಿಬಿಗೆ ನಿರ್ದೇಶಿಸಲಾಗಿದೆ ಎಂದು ನ್ಯಾಯಮಂಡಳಿ ತನ್ನ ಆದೇಶದಲ್ಲಿ ತಿಳಿಸಿತ್ತು.

ಆರ್ ಟಿಐ ಮಾಹಿತಿ ಪ್ರಕಾರ, ಸೆಪ್ಟೆಂಬರ್ 2022ರ ಗಡುವು ಮುಗಿದು ಎರಡು ವರ್ಷಗಳಿಗೂ ಅಧಿಕ ಸಮಯ ಕಳೆದರೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಯುಪಿಸಿಎಲ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಸುಪ್ರೀಂ ಕೋರ್ಟ್ ನಲ್ಲಿ ಕಂಪೆನಿಯ ಮೇಲ್ಮನವಿಯನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಉಲ್ಲೇಖಿಸಿದ್ದರೂ, ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಯಾವುದೇ ತಡೆಯಾಜ್ಞೆ ನೀಡಿಲ್ಲ.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಅದಾನಿ ಪವರ್ ಲಿಮಿಟೆಡ್ ತಿಳಿಸಿದೆ. ಸದರಿ ಪ್ರಕರಣವು ಸುಪ್ರೀಂ ಕೋರ್ಟ್ ಮುಂದೆ ವಿಚಾರಣೆಗೆ ಪಟ್ಟಿ ಮಾಡಬೇಕಿದೆ ಎಂದು ಆರ್ ಟಿಐ ಮಾಹಿತಿಯಲ್ಲಿ ಬಹಿರಂಗವಾಗಿದೆ.

ಸುಪ್ರೀಂ ಕೋರ್ಟ್ ಮಾಹಿತಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಮೇಲ್ಮನವಿಯಲ್ಲಿ ಕನಿಷ್ಠ ಒಂಬತ್ತು ದೋಷಗಳಿದ್ದು, ಅವುಗಳನ್ನು 2022 ಸೆಪ್ಟೆಂಬರ್ 14ರಂದು ಸರಿಪಡಿಸಲಾಗಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಗಡುವು ಮುಗಿದ ಎರಡು ವಾರಗಳ ನಂತರ ಈ ಲೋಪವನ್ನು ಸರಿಪಡಿಸಲಾಗಿದೆ ಎಂದು ತೋರಿಸುತ್ತದೆ. ಇದಲ್ಲದೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಈ ತೀರ್ಪಿಗೆ ಕಾರಣವಾದ ಜನಜಾಗೃತಿ ಸಮಿತಿಯು, UPCLನ ಮೇಲ್ಮನವಿ ಸಲ್ಲಿಕೆಯಾಗುವ ಒಂದು ತಿಂಗಳ ಮೊದಲು ಈ ವಿಷಯದಲ್ಲಿ ಕೇವಿಯಟ್ ಸಲ್ಲಿಸಿತ್ತು.

ಜಿಲ್ಲಾ ಕಂದಾಯ, ಕೃಷಿ ಮತ್ತು ಸಿಪಿಸಿಬಿ ಅಧಿಕಾರಿಗಳನ್ನು ಒಳಗೊಂಡ ಜಂಟಿ ಸಮಿತಿಯು UPCL ಉಷ್ಣ ಸ್ಥಾವರದ ಪರಿಣಾಮವನ್ನು ಅಧ್ಯಯನ ಮಾಡಿ ಕೃಷಿಗೆ ಉಂಟಾದ ಹಾನಿಯನ್ನು ನಿರ್ಣಯಿಸಬೇಕು ಎಂದು ಎನ್ ಜಿಟಿ ಆದೇಶಿಸಿತ್ತು. ಕೃಷಿ ಆದಾಯದ ನಷ್ಟವನ್ನು ಮೌಲ್ಯಮಾಪನ ಮಾಡಿ ಸಮಿತಿಯು ಪರಿಹಾರವನ್ನು ನಿರ್ಣಯಿಸಬೇಕಾಗಿತ್ತು. ಆ ಬಳಿಕ ಯುಪಿಸಿಎಲ್ ನಿಂದ ಮೊತ್ತವನ್ನು ವಸೂಲಿ ಮಾಡಿ ವಿತರಿಸಬೇಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News