×
Ad

2031ರ ವೇಳೆಗೆ 317 ಕಿ.ಮೀ.ಗಳ ಮೆಟ್ರೋ ಮಾರ್ಗ ನಿರ್ಮಾಣ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2023-10-20 17:54 IST

ಬೆಂಗಳೂರು, ಅ.20: ರಾಜ್ಯ ಸರಕಾರವು 2031ರ ವೇಳೆಗೆ 317 ಕಿ.ಮೀ.ಗಳ ಮೆಟ್ರೋ ಮಾರ್ಗವನ್ನು ನಿರ್ಮಿಸಲು ಸಿಎಂಪಿ ಪ್ಲಾನ್‍ನಲ್ಲಿ ಅನುಮೋದಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ವರ್ಚುಯಲ್ ಆಗಿ ಕೃಷ್ಣರಾಜಪುರದಿಂದ ಬೈಯಪ್ಪನಹಳ್ಳಿ ಹಾಗೂ ಕೆಂಗೇರಿಯಿಂದ ಚಲ್ಲಘಟ್ಟವರೆಗಿನ ಮೆಟ್ರೋ ವಿಸ್ತರಣಾ ಮಾರ್ಗವನ್ನು ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತ ಸರಕಾರ ಮತ್ತು ಕರ್ನಾಟಕ ಸರಕಾರದ ಜಂಟಿ ಪ್ರಯತ್ನದಿಂದ ಪ್ರಮುಖ ಎರಡು ಮಾರ್ಗಗಳಾದ ಕೃಷ್ಣರಾಜಪುರದಿಂದ ಬೈಯಪ್ಪನಹಳ್ಳಿ ನಡುವಿನ 2.10 ಕಿ.ಮೀ.ಗಳ ಉದ್ದ ಮತ್ತು ಕೆಂಗೇರಿಯಿಂದ ಚಲ್ಲಘಟ್ಟವರೆಗಿನ 2.05 ಕಿ.ಮೀ.ಗಳ ಉದ್ದದ ಮಾರ್ಗವನ್ನು ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಈ ಎರಡು ಪ್ರಮುಖ ಮಾರ್ಗಗಳನ್ನು ತೆರೆಯುವುದರೊಂದಿಗೆ, ಬೆಂಗಳೂರು ನಗರವು ಪೂರ್ವದಿಂದ ಪಶ್ಚಿಮಕ್ಕೆ ತಡೆರಹಿತ ಸಂಪರ್ಕ ಹೊಂದಿದಂತಾಗಿದೆ. ಮೆಟ್ರೊ ಜಾಲವನ್ನು 74 ಕಿ.ಮೀ.ಗಳಿಗೆ ವಿಸ್ತರಿಸಲಾಗಿದೆ. ಪ್ರತಿದಿನ 7 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ-1ರ 42.3 ಕಿ.ಮೀ.ಗಳ ಉದ್ದದ ಮಾರ್ಗವನ್ನು 14,133 ಕೋಟಿ ರೂ. ವೆಚ್ಚದಲ್ಲಿ ನಮ್ಮ ಸರಕಾರದ ಹಿಂದಿನ ಅವಧಿಯಲ್ಲಿ ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ ದೇಶಕ್ಕೆ ಸಮರ್ಪಿಸಿದರು. ಈ ಯೋಜನೆಗಾಗಿ ರಾಜ್ಯ ಸರಕಾರವು 5630 ಕೋಟಿ ರೂ.ಗಳಷ್ಟು ವೆಚ್ಚ ಮಾಡಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು ಮೆಟ್ರೊ ರೈಲು ಯೋಜನೆ ಹಂತ-2ರಲ್ಲಿ 75.06 ಕಿ.ಮೀ.ಗಳ ಉದ್ದದ ಮಾರ್ಗ ಹೊಂದಿದ್ದು, ಈ ಯೋಜನೆಗೆ 30,695 ಕೋಟಿ ರೂ. ವೆಚ್ಚವಾಗಲಿದೆ. 32 ಕಿ.ಮೀ.ಗಳ ಉದ್ದದ ಮಾರ್ಗವನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಗಿದೆ. ಸದ್ಯ ಬೆಂಗಳೂರು ಮೆಟ್ರೊ ಜಾಲದ ಕಾರ್ಯಾಚರಣೆಯು 74 ಕಿ.ಮೀ.ಗಳಿಗೆ ಏರಿಕೆಯಾಗಿದೆ ಎಂದು ಅವರು ತಿಳಿಸಿದರು.

ನಾಗಸಂದ್ರದಿಂದ ಮಾದವಾರದವರೆಗಿನ ಉತ್ತರ ವಿಸ್ತರಣೆ 3.14 ಕಿ.ಮೀ.ಗಳ ಉದ್ದದ ಮಾರ್ಗವು ಮತ್ತು ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರದವರೆಗೆ 19.15 ಕಿ.ಮೀ.ಗಳ ಉದ್ದದ ಹೊಸ ಮಾರ್ಗಗಳು ಮುಕ್ತಾಯದ ಹಂತದಲ್ಲಿದ್ದು, 2024ರ ಎಪ್ರಿಲ್ ವೇಳೆಗೆ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲು ಯೋಜಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ 21.26 ಕಿ.ಮೀ.ಗಳ ಉದ್ದದ ಹೊಸ ಮಾರ್ಗವನ್ನು 2025ರ ಮಾರ್ಚ್‍ರೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಈ ಮಾರ್ಗಗಳನ್ನು ಪೂರ್ಣಗೊಳಿಸುವುದರೊಂದಿಗೆ, ಕಾರ್ಯಾಚರಣೆಯ ಜಾಲವು 117 ಕಿ.ಮೀ.ಗಳಿಗೆ ವಿಸ್ತಾರಗೊಳ್ಳುತ್ತದೆ ಮತ್ತು ಪ್ರತಿ ದಿನ 12 ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆಯಿದೆ. ಹಂತ-2 ಯೋಜನೆಗಾಗಿ, ರಾಜ್ಯ ಸರಕಾರವು 11,583.08 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಓಆರ್ ಆರ್- ಏರ್ಪೋರ್ಟ್ ಮೆಟ್ರೋ ಎಂದು ಕರೆಯಲ್ಪಡುವ 58 ಕಿ.ಮೀ.ಗಳ ಉದ್ದದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‍ನಿಂದ ಹೆಬ್ಬಾಳ ಜಂಕ್ಷನ್ ಮೂಲಕ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಂತ 2ಎ ಮತ್ತು 2ಬಿ ಯೋಜನೆಯನ್ನು ಅಂದಾಜು 14,788.1 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, 2026ರ ವೇಳೆಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ರಾಜ್ಯ ಸರಕಾರವು ಹಂತ 2ಎ ಮತ್ತು 2ಬಿಗಾಗಿ 4,775.36 ಕೋಟಿ ಬಿಡುಗಡೆ ಮಾಡಿದೆ. ಈ ಯೋಜನೆಯು ಪೂರ್ಣಗೊಂಡ ನಂತರ, ಮೆಟ್ರೋ ಜಾಲವು 176 ಕಿ.ಮೀ. ಆಗಲಿದೆ ಮತ್ತು ಪ್ರತಿದಿನ ಸುಮಾರು 20 ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆಯಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು ಮೆಟ್ರೊ ರೈಲು ಯೋಜನೆಯ 3ನೇ ಹಂತದಲ್ಲಿ 45 ಕಿ.ಮೀ.ಗಳ ಉದ್ದದ ಮಾರ್ಗವನ್ನು ಅಂದಾಜು 15,611 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲು ಡಿಪಿಆರ್‍ನ್ನು ರಾಜ್ಯ ಸರಕಾರವು ಕೇಂದ್ರ ಸರಕಾರದ ಅನುಮೋದನೆಗಾಗಿ ಸಲ್ಲಿಸಿದೆ. ಈ ಯೋಜನೆಗೆ ಶೀಘ್ರವಾಗಿ ಅನುಮೋದನೆ ನೀಡುವಂತೆ ಪ್ರಧಾನಮಂತ್ರಿಗೆ ಅವರು ಮನವಿ ಮಾಡಿದರು.

ಅಲ್ಲದೆ, ಸರ್ಜಾಪುರದಿಂದ ಹೆಬ್ಬಾಳದವರೆಗಿನ 37 ಕಿ.ಮೀ.ಗಳ ಉದ್ದದ ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ-3ಎಗೆ ಡಿಪಿಆರ್ ತಯಾರಿಸಲಾಗುತ್ತಿದೆ. 2031ರ ವೇಳೆಗೆ 317 ಕಿ.ಮೀ.ಗಳ ಮೆಟ್ರೋ ಮಾರ್ಗಗಳನ್ನು ನಿರ್ಮಿಸಲು ಸಿಎಂಪಿ ಪ್ಲಾನ್‍ನಲ್ಲಿ ಅನುಮೋದಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಈಗಾಗಲೇ 257 ಕಿ.ಮೀ.ಗಳ ಮಾರ್ಗವು ಕಾರ್ಯಾಚರಣೆ, ನಿರ್ಮಾಣ ಮತ್ತು ಯೋಜನೆ ಹಂತದಲ್ಲಿದೆ. ಇನ್ನುಳಿದ 60 ಕಿ.ಮೀ.ಗಳ ಮೆಟ್ರೊ ಮಾರ್ಗಗಳ ಕಾರ್ಯಸಾಧ್ಯತೆಯ ಸಮೀಕ್ಷೆಯನ್ನು ಶೀಘ್ರದಲ್ಲೇ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಪ್ರೊ.ರಾಜೀವ್ ಗೌಡ್, ಶಾಸಕ ಎಸ್.ಟಿ.ಸೋಮಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News