ಎರಡೂವರೆ ವರ್ಷಗಳಲ್ಲಿ 2500 ರೈತರ ಆತ್ಮಹತ್ಯೆಯೇ ಕಾಂಗ್ರೆಸ್ ಸರಕಾರದ ಸಾಧನೆ: ಬಿ.ವೈ. ವಿಜಯೇಂದ್ರ
"ಉತ್ತರ ಕರ್ನಾಟಕದ ಸಮಸ್ಯೆ, ರೈತರ ಸಂಕಷ್ಟದ ಬಗ್ಗೆ ಸದನದಲ್ಲಿ ಚರ್ಚಿಸಿ"
ಬೆಳಗಾವಿ: ಎರಡೂವರೆ ವರ್ಷಗಳಲ್ಲಿ 2500 ರೈತರ ಆತ್ಮಹತ್ಯೆಯೇ ಈ ಕಾಂಗ್ರೆಸ್ ಸರಕಾರದ ಸಾಧನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿ ವತಿಯಿಂದ ಇಂದು “ಮಾಲಿನಿ ಸಿಟಿ ಮೈದಾನ”ದಲ್ಲಿ ನಡೆದ ಬೃಹತ್ ಪ್ರತಿಭಟನೆ ಸಂದರ್ಭದಲ್ಲಿ ಅವರು ಮಾತನಾಡಿದರು. ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ಮೊದಲು ಈ ಪ್ರತಿಭಟನೆ ನಡೆಯಿತು. ರೈತ ವಿರೋಧಿ ಸರಕಾರಕ್ಕೆ ಉಳಿಗಾಲವಿಲ್ಲ ಎಂದು ಅವರು ಎಚ್ಚರಿಸಿದರು.
ನಾಡಿನ ರೈತರ ಸಂಕಷ್ಟಕ್ಕೆ ನೀವು ಸ್ಪಂದಿಸಿದ್ದೀರಾ ಎಂದು ಜನರು ಕೇಳುತ್ತಿದ್ದಾರೆ. ಭತ್ತ, ಕಬ್ಬು, ಹತ್ತಿ, ಮೆಕ್ಕೆಜೋಳ ಮೊದಲಾದ ಉತ್ಪನ್ನ ಬೆಳೆಯುವ ರೈತರ ಮತ್ತು ಅನ್ನದಾತರ ಸಂಕಷ್ಟಕ್ಕೆ ನೀವು ಸ್ಪಂದಿಸಿಲ್ಲವೇಕೆ ಎಂದು ಟೀಕಿಸಿದರು. ಅತಿವೃಷ್ಟಿ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನೆಲದ ಮೇಲೆ ಓಡಾಡಲಿಲ್ಲ; ವೈಮಾನಿಕ ಸಮೀಕ್ಷೆ ಮಾಡಿದ್ದರು ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಸರಕಾರದ ರೈತವಿರೋಧಿ ನೀತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಎಫ್‍ಆರ್‍ಪಿಗಿಂತ ಹೆಚ್ಚು ಕನಿಷ್ಠ ಬೆಂಬಲ ಬೆಲೆ ನೀಡಲು ಅವಕಾಶವಿದೆ. ಆದರೆ, ಇದನ್ಯಾಕೆ ಮಾಡಿಲ್ಲ ಸಿದ್ದರಾಮಯ್ಯನವರೇ ಎಂದು ಕೇಳಿದರು. ಇದೊಂದು ಲಜ್ಜೆಗೆಟ್ಟ ಸರಕಾರ ಎಂದು ಆರೋಪಿಸಿದರು.
ಉತ್ತರ ಕರ್ನಾಟಕದ ಸಮಸ್ಯೆಗಳು, ರೈತರ ಸಂಕಷ್ಟದ ಕುರಿತು ಸದನದಲ್ಲಿ ಚರ್ಚೆ ಮಾಡಿ ಎಂದು ಆಗ್ರಹಿಸಿದರು. ಯಡಿಯೂರಪ್ಪ ಅವರ ರೈತಪರ ನಿರಂತರ ಹೋರಾಟವನ್ನು ನೆನಪಿಸಿದ ಅವರು, ನಾನು ಯಡಿಯೂರಪ್ಪನವರ ಮಗನಾಗಿ, ಬಿಜೆಪಿ ರಾಜ್ಯಾಧ್ಯಕ್ಷನಾಗಿ ರೈತಪರವಾಗಿ ಸದಾ ನಿಲ್ಲುವುದಾಗಿ ಹೇಳಿದರು. ರೈತರ ಹೋರಾಟಕ್ಕೆ ನ್ಯಾಯ ಸಿಗುವವರೆಗೆ ವಿರಮಿಸುವುದಿಲ್ಲ ಎಂದು ಅವರು ತಿಳಿಸಿದರು.
ವಿಧಾನಸಭೆ ಒಳಗೆಯೂ ಹೋರಾಟ: ಆರ್.ಅಶೋಕ್
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ರೈತರ ಧ್ವನಿ ಸುವರ್ಣಸೌಧ, ವಿಧಾನಸೌಧವನ್ನು ಮುಟ್ಟಬೇಕು ಎಂದು ಆಶಿಸಿದರು. ವಿಧಾನಸಭೆ ಒಳಗೆಯೂ ಹೋರಾಟ ಮುಂದುವರೆಯಲಿದೆ. ಕರ್ನಾಟಕದಲ್ಲಿ ಸರಕಾರ ಇಲ್ಲ; ಅದು ಸತ್ತುಹೋಗಿದೆ ಎಂದು ಅವರು ಟೀಕಿಸಿದರು.
ಇದು ರೈತವಿರೋಧಿ ಸರಕಾರ: ಛಲವಾದಿ ನಾರಾಯಣಸ್ವಾಮಿ
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ರಾಜ್ಯದ ಅನೇಕ ಪ್ರದೇಶಗಳು ಅತಿವೃಷ್ಟಿಗೆ ತುತ್ತಾಗಿ ಬೆಳೆ ನಾಶವಾಗಿದೆ. ಹತ್ತಿ, ತೊಗರಿ, ಉದ್ದು ಇಲ್ಲ ಎಂಬಂತಾಗಿದೆ. ಸರಕಾರ ರೈತರ ಸಮಸ್ಯೆಗಳನ್ನು ಕೇಳಿ ಅದನ್ನು ಪರಿಹರಿಸಬೇಕಿತ್ತು. ಆದರೆ, ರೈತ ವಿರೋಧಿ ಸರಕಾರ ಹೀಗೇ ನಡೆದುಕೊಳ್ಳುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ತಿಳಿಸಿದರು. ಬಿಜೆಪಿ ತಂಡಗಳನ್ನು ರೂಪಿಸಿ ಪ್ರವಾಸ ಮಾಡಿತ್ತು ಎಂದು ನೆನಪಿಸಿದರು.
ರೈತರ ಸಮಸ್ಯೆ ಪರಿಹರಿಸಿ: ಎನ್.ರವಿಕುಮಾರ್
ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಮಾತನಾಡಿ, ರೈತರ ಸಮಸ್ಯೆಗಳನ್ನು ಸಿದ್ದರಾಮಯ್ಯ ಸರಕಾರ ಪರಿಹರಿಸಬೇಕು. ಇಲ್ಲವೇ ಅಧಿಕಾರ ಬಿಟ್ಟು ತೊಲಗಲಿ ಎಂದು ತಿಳಿಸಿದರು. ರೈತರ ಸಂಕಷ್ಟ ಮುಂದುವರೆದಿದೆ. ರಾಜ್ಯವು ರೈತರ ಆತ್ಮಹತ್ಯೆಯಲ್ಲಿ ಎರಡನೇ ಸ್ಥಾನ ಪಡೆದಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಕಳವಳ ವ್ಯಕ್ತಪಡಿಸಿದರು. ರೈತರ ಸಂಕಷ್ಟವನ್ನು ಪರಿಹರಿಸುವಂತೆ ಆಗ್ರಹಿಸಿದರು.
ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.