ಕೋರ್ಟ್ ಆದೇಶದ ಉದ್ದೇಶಪೂರ್ವಕ ಉಲ್ಲಂಘನೆ; ವಿಠಲ ಗೌಡಗೆ 30 ದಿನ ಸಿವಿಲ್ ಕಾರಾಗೃಹ ಶಿಕ್ಷೆ
ವಿಠಲ ಗೌಡ
ಬೆಂಗಳೂರು : ನ್ಯಾಯಾಲಯದ ಆದೇಶಗಳನ್ನು ಉದ್ದೇಶಪೂರ್ವಕವಾಗಿ ಹಾಗೂ ಪದೇ ಪದೆ ಉಲ್ಲಂಘಿಸಿದ ಕಾರಣಕ್ಕೆ ಸೌಜನ್ಯಾ ಮಾವ ವಿಠಲ ಗೌಡ ಅವರಿಗೆ 30 ದಿನಗಳ ಸಿವಿಲ್ ಕಾರಾಗೃಹ ಶಿಕ್ಷೆ ವಿಧಿಸಿ ಬೆಂಗಳೂರು ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಶನಿವಾರ ಆದೇಶಿಸಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ, ಅದರ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತವರ ಕುಟುಂಬ ಸದಸ್ಯರು ಹಾಗೂ ಧರ್ಮಸ್ಥಳಕ್ಕೆ ಸಂಬಂಧಿಸಿದ ಸಂಸ್ಥೆಗಳ ಕುರಿತು ಯಾವುದೇ ರೀತಿಯ ಅವಹೇಳನಕಾರಿ ಹೇಳಿಕೆಗಳನ್ನು ನೀಡಬಾರದು ಅಥವಾ ಪ್ರಕಟಿಸಬಾರದು ಎಂದು ಈ ಹಿಂದೆ ನ್ಯಾಯಾಲಯ ಪ್ರತಿಬಂಧಕಾದೇಶ ವಿಧಿಸಿತ್ತು.
ನ್ಯಾಯಾಲಯದ ಆದೇಶವನ್ನು ವಿಠಲ ಗೌಡ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಧರ್ಮಸ್ಥಳ ಕ್ಷೇತ್ರದ ಪರವಾಗಿ ಶೀನಪ್ಪ ಅವರು ದೂರು ನೀಡಿದ್ದರು. ಶನಿವಾರ ವಿಚಾರಣೆ ವೇಳೆ ನ್ಯಾಯಾಲಯದ ಪ್ರತಿಬಂಧಕಾದೇಶವಿದ್ದರೂ ವಿಠಲ ಗೌಡ ಅವರು ಅದನ್ನು ಉಲ್ಲಂಘಿಸಿ, ಮತ್ತೆ ಮತ್ತೆ ಧರ್ಮಸ್ಥಳದ ವಿರುದ್ಧ ಹೇಳಿಕೆಗಳನ್ನು ನೀಡಿರುವುದು ನ್ಯಾಯಾಲಯದ ಗಮನಕ್ಕೆ ಬಂದಿತ್ತು.
ನ್ಯಾಯಾಲಯದ ಆದೇಶಗಳ ಬಗ್ಗೆ ಸಂಪೂರ್ಣ ಅರಿವಿದ್ದರೂ, ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಕುಟುಂಬ ಹಾಗೂ ಸಂಸ್ಥೆಗಳ ವಿರುದ್ಧ ಆರೋಪಿತರು ಹೇಳಿಕೆಗಳನ್ನು ನೀಡಿರುವುದು ನ್ಯಾಯಾಲಯಕ್ಕೆ ತೋರಿದ ಅಗೌರವ ಹಾಗೂ ಉದ್ದೇಶಪೂರ್ವಕ ಅವಿಧೇಯತೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ದಾಖಲೆಗಳ ಪರಿಶೀಲನೆಯ ನಂತರ, ಆರೋಪಿತರು ನೀಡಿದ ಹೇಳಿಕೆಗಳು ಸುಳ್ಳು, ಆಧಾರರಹಿತ ಮತ್ತು ಯಾವುದೇ ತಾತ್ವಿಕ ಮೌಲ್ಯರಹಿತವಾಗಿವೆ. ನ್ಯಾಯಾಲಯದ ಘನತೆ ಮತ್ತು ಆದೇಶಗಳ ಪ್ರಾಮಾಣಿಕತೆಯನ್ನು ಕಾಪಾಡಲು ಕಠಿಣ ಕ್ರಮ ಅಗತ್ಯವೆಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಆರೋಪಿತ ವಿಠಲ ಗೌಡ ಅವರಿಗೆ 30 ದಿನಗಳ ಸಿವಿಲ್ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.
ಪ್ರಕರಣದ ವಿಚಾರಣೆಯಲ್ಲಿ ನ್ಯಾಯಾಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಪರವಾಗಿ ಹಿರಿಯ ವಕೀಲರಾದ ಎಸ್. ರಾಜಶೇಖರ್ ಹಿಲಿಯಾರು ವಾದ ಮಂಡಿಸಿದ್ದರು.