ಬೆಂಗಳೂರು ಬಂದ್ ವೇಳೆ ಭದ್ರತೆಗೆ ನಿಯೋಜನೆಗೊಂಡ ಪೊಲೀಸರಿಗೆ ನೀಡಿದ ಊಟದಲ್ಲಿ ಸತ್ತ ಇಲಿ ಪತ್ತೆ
ಬೆಂಗಳೂರು, ಸೆ.26: ಬೆಂಗಳೂರು ಬಂದ್ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ನೀಡಲಾಗಿದ್ದ ತಿಂಡಿಯಲ್ಲಿ ಸತ್ತ ಇಲಿ ಪತ್ತೆಯಾಗಿದ್ದು, ಈ ಸಂಬಂಧ ಹೋಟೆಲ್ ಮಾಲಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ನಗರ ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
ಇಲ್ಲಿನ ಆರ್.ಎಂ.ಸಿ ಯಾರ್ಡ್ ಠಾಣೆ ವ್ಯಾಪ್ತಿಯಲ್ಲಿ ಕರ್ತವ್ಯದಲ್ಲಿದ್ದ ಯಶವಂತಪುರ ಸಂಚಾರ ಠಾಣಾ ಸಿಬ್ಬಂದಿಯೊಬ್ಬರು ಪೊಲೀಸ್ ಇಲಾಖೆಯಿಂದ ಸರಬರಾಜು ಮಾಡಲಾಗಿದ್ದ ರೈಸ್ ಬಾತ್ ಪೊಟ್ಟಣವೊಂದರಲ್ಲಿ ಸತ್ತ ಇಲಿ ಕಂಡುಬಂದಿದೆ. ತಕ್ಷಣ ಎಚ್ಚೆತ್ತ ಸಿಬ್ಬಂದಿ, ಪೊಲೀಸ್ ಸಿಬ್ಬಂದಿಗಳ ವಾಟ್ಸಪ್ ಗ್ರೂಪ್‍ನಲ್ಲಿ ವಿಷಯ ತಿಳಿಸಿದ್ದು, ಯಾರೂ ಸಹ ಆ ಆಹಾರ ಸೇವಿಸದಂತೆ ಸೂಚನೆ ನೀಡಿದ್ದಾರೆ.
ಅಲ್ಲದೆ, ಪೊಲೀಸರಿಗೆ 180 ಆಹಾರ ಪೊಟ್ಟಣ ಪೂರೈಕೆ ಮಾಡಲಾಗಿತ್ತು. ಈ ಪೈಕಿ ಒಂದು ಪೊಟ್ಟಣದಲ್ಲಿ ಇಲಿ ಪತ್ತೆಯಾಗಿದೆ. ಉಳಿದ ಆಹಾರದಲ್ಲೂ ಸತ್ತ ಇಲಿಯ ಅಂಶ ಇರುವ ಅನುಮಾನವಿತ್ತು. ಹೀಗಾಗಿ, ಎಲ್ಲ ಪೊಟ್ಟಣಗಳನ್ನು ವಾಪಸು ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಕಾನ್‍ಸ್ಟೆಬಲ್‍ವೊಬ್ಬರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಸಂಚಾರ ಜಂಟಿ ಆಯುಕ್ತ ಎಂ.ಎನ್.ಅನುಚೇತ್, ಮಂಗಳವಾರ ಬೆಳಗ್ಗೆ 7:30ರ ಸುಮಾರಿಗೆ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ವಿಭಾಗದ ಸುಮಾರು 180 ಜನ ಸಿಬ್ಬಂದಿಗಾಗಿ ಯಶವಂತಪುರದ ಹೋಟೆಲ್ ಒಂದರಿಂದ ತಿಂಡಿ ತರಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಚಾರಿ ಪೆÇಲೀಸ್ ಸಿಬ್ಬಂದಿಯೊಬ್ಬರಿಗೆ ನೀಡಲಾಗಿದ್ದ ತಿಂಡಿಯಲ್ಲಿ ಸತ್ತ ಇಲಿ ಸಿಕ್ಕಿದೆ. ತಕ್ಷಣ ಅವರು ಇತರೆ ಸಿಬ್ಬಂದಿಯ ಗಮನಕ್ಕೆ ತಂದು ಯಾರೂ ತಿಂಡಿ ಸೇವಿಸದಂತೆ ತಿಳಿಸಿದ್ದಾರೆ. ತಿಂಡಿ ತರಿಸಲಾಗಿದ್ದ ಹೋಟೆಲ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಿದ್ದೇವೆ. ಸಂಚಾರ ಠಾಣೆಯ ಇನ್ಸ್‍ಪೆಕ್ಟರ್ ವಿರುದ್ಧ ಶಿಸ್ತು ಕ್ರಮ ಜರುಗಿಸಲಿದ್ದೇವೆ ಎಂದರು.