×
Ad

ಜೈಲಿನಲ್ಲಿ ದರ್ಶನ್‍ಗೆ ರಾಜಾತಿಥ್ಯ ಪ್ರಕರಣ | ಸಮಗ್ರ ತನಿಖೆ ನಡೆಸಿ ವರದಿ ನೀಡಲು ಸಿಸಿಬಿ ಜಂಟಿ ಪೊಲೀಸ್ ಆಯುಕ್ತರ ನೇಮಕ

Update: 2024-09-02 21:44 IST

ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‍ಗೆ ರಾಜಾತಿಥ್ಯ ಕಲ್ಪಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯ ಸರಕಾರ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರನ್ನು ನೇಮಿಸಿ ನಿರ್ದೇಶಿಸಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್, ರೌಡಿಶೀಟರ್ ವಿಲ್ಸನ್‍ಗಾರ್ಡನ್ ನಾಗ ಸೇರಿದಂತೆ ಸಜಾ ಬಂಧಿಗಳ ಜೊತೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಆರೋಪ ಸಂಬಂಧ ಜೈಲಿನ ಅಧೀಕ್ಷಕ, ಸೂಪರಿಡೆಂಟೆಂಟ್ ಸೇರಿ 9 ಮಂದಿ ಜೈಲು ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು. ಅಲ್ಲದೇ, ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲ ಆರೋಪಿಗಳನ್ನು ರಾಜ್ಯದ ವಿವಿಧ ಕಾರಾಗೃಹಗಳಿಗೆ ಸ್ಥಳಾಂತರ ಮಾಡಲಾಗಿತ್ತು.

ಈ ಬಗ್ಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಮೂರು ಪ್ರಕರಣ ದಾಖಲಾಗಿತ್ತು. ಜೈಲಿನಲ್ಲಿ ದರ್ಶನ್ ವಿಡಿಯೋ ಕರೆ ಮಾಡಿ ಮಾತನಾಡಿರುವುದು, ಸಿಗರೇಟು ಸೇದಿರುವುದು ಹಾಗೂ ಜೈಲು ಸಿಬ್ಬಂದಿ ವಿರುದ್ಧ ದಾಖಲಾಗಿದ್ದ ಪ್ರಕರಣಗಳಲ್ಲಿ ಇಬ್ಬರು ಇನ್‍ಸ್ಪೆಕ್ಟರ್ ಹಾಗೂ ಎಸಿಪಿ ಈಗಾಗಲೇ ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಹಾಗೂ ಜೈಲು ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದ್ದರೂ ಸಿಗರೇಟು ಸೇರಿದಂತೆ ನಿಷೇಧಿತ ವಸ್ತುಗಳು ಹೇಗೆ ಸಾಗಾಟವಾಗಿವೆ ಎಂಬ ಹಲವು ಗುಮಾನಿಗಳನ್ನು ಹುಟ್ಟುಹಾಕುವಂತೆ ಮಾಡಿದೆ. ಸಿಬ್ಬಂದಿ ಕಣ್ತಪ್ಪಿಸಿ ನಿಷೇಧಿತ ವಸ್ತುಗಳು ಹೇಗೆ ಬಂದವು? ಇದರ ಹಿಂದೆ ಜೈಲು ಸಿಬ್ಬಂದಿ ಕೈವಾಡವಿದೆಯಾ? ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರಿಗೆ ರಾಜ್ಯ ಸರಕಾರ ಸೂಚನೆ ಹೊರಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News