ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀಗೆ ಅಶ್ಲೀಲ ಸಂದೇಶ ರವಾನೆ: ಇಬ್ಬರು ಆರೋಪಿಗಳ ಬಂಧನ
ಬೆಂಗಳೂರು, ಜ.2: ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶ ಹಾಗೂ ಅವಹೇಳನಾಕಾರಿ ಕಾಮೆಂಟ್ ಮಾಡಿದ ಆರೋಪದಡಿ ಇಬ್ಬರು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಬಾಣಾವರ ನಿವಾಸಿ ಆಟೋ ಚಾಲಕ ಚಂದ್ರಶೇಖರ್(45) ಹಾಗೂ ದಾವಣಗೆರೆಯ ಸಾಫ್ಟ್‌ವೇರ್ ಇಂಜಿನಿಯರ್ ನಿತಿನ್(31) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಈ ಮೊದಲು ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಹಾಗೂ ಕುಟುಂಬದ ಸದಸ್ಯರ ಕುರಿತು ಅಶ್ಲೀಲ ಕಮೆಂಟ್, ಪೋಸ್ಟ್‌ಗಳನ್ನು ಮಾಡಲಾಗುತ್ತಿದೆ ಎಂದು ವಿಜಯಲಕ್ಷ್ಮೀ ಆರೋಪಿಸಿದ್ದರು. ಈ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ಸುಮಾರು 18 ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು.
ಈ ದೂರಿನನ್ವಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿತ್ತು. ಸದ್ಯ ಇಬ್ಬರನ್ನು ಬಂಧಿಸಲಾಗಿದ್ದು, ವಿಚಾರಣೆ ಕೈಗೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.