×
Ad

EVM ಬಗ್ಗೆ ಹಳೆಯ ಸಮೀಕ್ಷೆ ಮುಂದಿಟ್ಟು ‘ವಿಶ್ವಾಸ’ ತೋರಿಸುವ ಪ್ರಯತ್ನ?

‘ಮತಗಳ್ಳತನ’ ಆರೋಪಗಳ ಬೆನ್ನಲ್ಲೇ ಕರ್ನಾಟಕದ ಸಮೀಕ್ಷೆ ವಿವಾದ

Update: 2026-01-02 22:50 IST

 ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.2: ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಅವರು ಮಾಡಿದ ‘ಮತಗಳ್ಳತನ’ ಆರೋಪಗಳು ದೇಶಾದ್ಯಂತ ಚರ್ಚೆಗೆ ಕಾರಣವಾಗಿರುವ ನಡುವೆಯೇ, EVM ಯಂತ್ರಗಳ ಬಗ್ಗೆ ಜನರಿಗೆ ಭಾರೀ ನಂಬಿಕೆ ಇದೆ ಎಂದು ಹೇಳುವ ಸಮೀಕ್ಷಾ ವರದಿಯೊಂದು ಕರ್ನಾಟಕದಲ್ಲಿ ಪ್ರಕಟವಾಗಿರುವುದು ರಾಜಕೀಯ ವಲಯದಲ್ಲಿ ವಿವಾದಕ್ಕೆ ಕಾರಣವಾಗಿದೆ. ಈ ವರದಿಯನ್ನು ಕಾಂಗ್ರೆಸ್ ಪಕ್ಷವೇ ಪ್ರಶ್ನಿಸಿದ್ದು, ಜನರ ಅಪನಂಬಿಕೆಯನ್ನು ಮುಚ್ಚಿಹಾಕಲು ಹಳೆಯ ಸಮೀಕ್ಷೆಯನ್ನು ಮುಂದಿಟ್ಟು ‘ನಕಲಿ ವಿಶ್ವಾಸ’ದ ಚಿತ್ರಣ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದೆ.

EVM ಯಂತ್ರಗಳ ಸುರಕ್ಷತೆ ಮತ್ತು ವಿಶ್ವಾಸಾರ್ಹತೆ ಕುರಿತು ಜನರಲ್ಲಿ ಅನುಮಾನ ಮೂಡಿದೆ ಎಂದು ವಿರೋಧ ಪಕ್ಷಗಳು ವಾದಿಸುತ್ತಿರುವ ಸಂದರ್ಭದಲ್ಲಿ, ಕರ್ನಾಟಕ ರಾಜ್ಯ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರ ಬಿಡುಗಡೆ ಮಾಡಿದೆ ಎನ್ನಲಾದ ವರದಿ, ಶೇಕಡಾ 83.61ರಷ್ಟು ಜನರು EVM ಮೇಲೆ ಪೂರ್ಣ ವಿಶ್ವಾಸ ಹೊಂದಿದ್ದಾರೆ ಎಂದು ಹೇಳಿದೆ. ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರಗಿ ಭಾಗಗಳ 102 ವಿಧಾನಸಭಾ ಕ್ಷೇತ್ರಗಳಲ್ಲಿ 5,100 ಜನರನ್ನು ಪ್ರಶ್ನಿಸಿ ಈ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದು ವರದಿ ತಿಳಿಸಿದೆ.

ಆದರೆ, ಈ ಸಮೀಕ್ಷೆಯ ಸಮಯ ಮತ್ತು ಹಿನ್ನೆಲೆಯನ್ನು ಪ್ರಶ್ನಿಸಿರುವ ಕಾಂಗ್ರೆಸ್, ಇದರಲ್ಲಿ ಹಲವು ಅನುಮಾನಾಸ್ಪದ ಅಂಶಗಳಿವೆ ಎಂದು ಹೇಳಿದೆ. ಈ ಸಮೀಕ್ಷೆ ಮೇ 2025ರಲ್ಲಿ ನಡೆಸಲಾಗಿದೆ. ಆದರೆ ರಾಹುಲ್ ಗಾಂಧಿಯವರು EVM ಹ್ಯಾಕಿಂಗ್ ಹಾಗೂ ‘ಮತಗಳ್ಳತನ’ ಕುರಿತು ಸತತ ಮೂರು ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದು ಆಗಸ್ಟ್ 2025ರ ನಂತರ. ಹರಿಯಾಣ ಮತ್ತು ಮಹಾರಾಷ್ಟ್ರ ಚುನಾವಣಾ ಫಲಿತಾಂಶಗಳ ಬಳಿಕವೇ EVM ಮೇಲಿನ ಅನುಮಾನ ಸಾರ್ವಜನಿಕ ವಲಯದಲ್ಲಿ ದಟ್ಟವಾಗಿದೆ. ಇಂತಹ ಸಂದರ್ಭದಲ್ಲಿ, ವಿವಾದಕ್ಕೆ ಮುನ್ನ ನಡೆದ ಹಳೆಯ ಸಮೀಕ್ಷೆಯನ್ನು ಈಗ ಮುಂದಿಟ್ಟು ‘ಜನರಿಗೆ EVM ಮೇಲೆ ನಂಬಿಕೆ ಇದೆ’ ಎಂದು ಹೇಳುವುದರಲ್ಲಿ ಏನು ಅರ್ಥವಿದೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರಿನೇತ್, “ಜನರಲ್ಲಿ EVM ಬಗ್ಗೆ ಅನುಮಾನ ತೀವ್ರವಾಗಿರುವ ಈಗಿನ ಸಂದರ್ಭದಲ್ಲಿ, ಮೇ ತಿಂಗಳಲ್ಲಿ ನಡೆದ ಸಮೀಕ್ಷೆಯನ್ನು ಮುಂದಿಟ್ಟು ನಂಬಿಕೆಯ ಚಿತ್ರಣ ನೀಡಲು ಪ್ರಯತ್ನಿಸಲಾಗುತ್ತಿದೆ. ಇದು ಜನರನ್ನು ದಾರಿ ತಪ್ಪಿಸುವ ಯತ್ನವಲ್ಲವೇ?” ಎಂದು ಪ್ರಶ್ನಿಸಿದ್ದಾರೆ.

ಈ ಸಮೀಕ್ಷೆಯನ್ನು ಮೈಸೂರು ಮೂಲದ ‘ಗ್ರಾಸ್ ರೂಟ್ಸ್ ರಿಸರ್ಚ್ ಅಂಡ್ ಅಡ್ವೊಕಸಿ ಮೂವ್‌ಮೆಂಟ್’ (GRAAM) ಎಂಬ ಸಂಸ್ಥೆ ನಡೆಸಿದೆ. ಇದರ ನೇತೃತ್ವವನ್ನು ಡಾ. ಆರ್. ಬಾಲಸುಬ್ರಮಣಿಯಂ ವಹಿಸಿದ್ದಾರೆ. ಕಾಂಗ್ರೆಸ್ ಆರೋಪದ ಪ್ರಕಾರ, ಡಾ.ಬಾಲಸುಬ್ರಮಣಿಯಂ ಅವರು ಪ್ರಧಾನಿ ನರೇಂದ್ರ ಮೋದಿಯವರ ಪರಮ ಭಕ್ತರಾಗಿದ್ದು, ಮೋದಿಯವರನ್ನು ಹೊಗಳಿ ಪುಸ್ತಕವನ್ನೂ ಬರೆದಿದ್ದಾರೆ. ಇಂತಹ ಹಿನ್ನೆಲೆಯಿರುವ ವ್ಯಕ್ತಿಯ ನೇತೃತ್ವದ ಸಂಸ್ಥೆ ನೀಡುವ EVM ಕುರಿತ ವರದಿಯನ್ನು ನಿಷ್ಪಕ್ಷಪಾತವೆಂದು ಒಪ್ಪಿಕೊಳ್ಳಲು ಸಾಧ್ಯವೇ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ಅಧಿಕೃತ ಸಮೀಕ್ಷೆಯೇ ಎಂಬ ಗೊಂದಲಕ್ಕೂ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದ್ದಾರೆ. “ರಾಜ್ಯ ಸರ್ಕಾರ ಈ ಸಮೀಕ್ಷೆಯನ್ನು ಅನುಮೋದಿಸಿಲ್ಲ. ಇದು ಸರ್ಕಾರದ ವತಿಯಿಂದ ನಡೆಸಲಾದ ಸಮೀಕ್ಷೆಯಲ್ಲ,” ಎಂದು ಅವರು ಹೇಳಿದ್ದಾರೆ.

ಪ್ರಿಯಾಂಕ್ ಖರ್ಗೆಯವರ ಪ್ರಕಾರ, “ಚುನಾವಣಾ ಆಯೋಗವೇ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗೆ (CEO) ಮನವಿ ಮಾಡಿತ್ತು. ಅದರಂತೆ ಬಾಲಸುಬ್ರಮಣಿಯಂ ಅವರ NGO ಮೂಲಕ ಈ ಸಮೀಕ್ಷೆ ನಡೆಸಲಾಗಿದೆ. ಪಿಎಂ ಕಚೇರಿಯೊಂದಿಗೆ ನಂಟು ಹೊಂದಿರುವವರಿಂದ ನಿಷ್ಪಕ್ಷಪಾತ ವರದಿ ನಿರೀಕ್ಷಿಸಲು ಸಾಧ್ಯವೇ?” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗ ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು ರಾಜ್ಯ ವ್ಯವಸ್ಥೆಯನ್ನು ಬಳಸಿಕೊಂಡು ಇಂತಹ ಕ್ರಮಗಳಿಗೆ ಕೈಹಾಕುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಕೇವಲ 5,100 ಜನರ ಮಾದರಿಯನ್ನು ಆಧಾರವಾಗಿಟ್ಟುಕೊಂಡು, ಅದೂ EVM ವಿವಾದ ಉದ್ಭವಿಸುವ ಮೊದಲೇ ನಡೆಸಿದ ಹಳೆಯ ಸಮೀಕ್ಷೆಯನ್ನು ಈಗ ಬಿಡುಗಡೆ ಮಾಡುವ ಅಗತ್ಯವೇನು? ಇದರ ಹಿಂದೆ ಭಯವಿದೆಯೇ ಅಥವಾ ಹತಾಶೆಯೇ? ಇಂತಹ ಪ್ರಾಯೋಜಿತ ಸಮೀಕ್ಷೆಗಳ ಮೂಲಕ ಚುನಾವಣಾ ಆಯೋಗ ತನ್ನ ಕಳೆದುಕೊಳ್ಳುತ್ತಿರುವ ವಿಶ್ವಾಸಾರ್ಹತೆಯನ್ನು ಮರಳಿ ಪಡೆಯಲು ಸಾಧ್ಯವೇ ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News