×
Ad

ಜವಳಿ ನೀತಿಯಲ್ಲಿ ಕೈಮಗ್ಗ ಉದ್ದಿಮೆಗೆ ಉತ್ತೇಜನ: ಸಚಿವ ಶಿವಾನಂದ ಪಾಟೀಲ್

Update: 2026-01-02 22:34 IST

Pc: @iShivanandpatil

ಬೆಂಗಳೂರು, ಜ.2: ಕೈಮಗ್ಗ ಉತ್ಪನ್ನಗಳ ಉತ್ತೇಜನಕ್ಕೆ ಪೂರಕವಾದ ಅಂಶಗಳನ್ನು ನೂತನ ಜವಳಿ ನೀತಿಯಲ್ಲಿ ಅಳವಡಿಸಲಾಗುವುದು ಎಂದು ಜವಳಿ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.

ಶುಕ್ರವಾರ ಮಹಾಲಕ್ಷ್ಮೀ ಲೇಔಟ್‌ನ ರಾಣಿ ಅಬ್ಬಕ್ಕ ಮೈದಾನದಲ್ಲಿ ಜವಳಿ ಮಂತ್ರಾಲಯ, ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಆಯೋಜಿಸಿರುವ 15 ದಿನಗಳ ರಾಷ್ಟ್ರೀಯ ಕೈಮಗ್ಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೊಸತನ ಅಳವಡಿಸಿಕೊಂಡರೆ ಮಾತ್ರ ಕೈಮಗ್ಗ ಉದ್ಯಮಕ್ಕೆ ಭವಿಷ್ಯ ಇದೆ. ಈ ನಿಟ್ಟಿನಲ್ಲಿ ಪೂರಕ ಅಂಶಗಳನ್ನು ಜವಳಿ ನೀತಿಯಲ್ಲಿ ಸೇರ್ಪಡೆ ಮಾಡಲಾಗುವುದು ಎಂದರು.

ನೇಕಾರ ಸಮ್ಮಾನ್ ಯೋಜನೆಯಲ್ಲಿ ನೀಡುತ್ತಿದ್ದ 2 ಸಾವಿರ ರೂ. ಆರ್ಥಿಕ ನೆರವನ್ನು ರಾಜ್ಯ ಸರಕಾರ 5 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಿದೆ. 2024-25ನೇ ಸಾಲಿನಲ್ಲಿ 1,17,459 ನೇಕಾರರ ಬ್ಯಾಂಕ್ ಖಾತೆಗಳಿಗೆ 58.69 ಕೋಟಿ ರೂ.ಗಳನ್ನು ಜಮಾ ಮಾಡಲಾಗಿದೆ. 2025-26ನೇ ಸಾಲಿನಲ್ಲಿ 1.2 ಲಕ್ಷ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರನ್ನು ಈ ಯೋಜನೆಯಲ್ಲಿ ಅಳವಡಿಸಲು 60 ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, ಮೊದಲ ಕಂತಿನಲ್ಲಿ ತಲಾ 2,500 ರೂ.ಗಳಂತೆ 29.99 ಕೋಟಿ ರೂ.ಗಳನ್ನು ಡಿಬಿಟಿ ಮೂಲಕ ಬಿಡುಗಡೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ನೇಕಾರರ ಮಕ್ಕಳ ಉನ್ನತ ಶಿಕ್ಷಣ ಪ್ರೋತ್ಸಾಹದ ದೃಷ್ಟಿಯಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು, 2024-25ನೇ ಸಾಲಿನಲ್ಲಿ 2,843 ವಿದ್ಯಾರ್ಥಿಗಳಿಗೆ 1.65 ಕೋಟಿ ರೂ. ಹಾಗೂ 2025-26ನೇ ಸಾಲಿನಲ್ಲಿ ಇದುವರೆಗೆ 1,137 ವಿದ್ಯಾರ್ಥಿಗಳಿಗೆ 62.62 ಲಕ್ಷ ರೂ. ನೀಡಲಾಗಿದೆ. ಕೈಮಗ್ಗ ಉತ್ಪನ್ನಗಳ ಮಾರಾಟವನ್ನು ಉತ್ತೇಜಿಸಲು ಪ್ರತಿಶತ 20ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು, 2024-25ನೇ ಸಾಲಿನಲ್ಲಿ ಈ ಉದ್ದೇಶಕ್ಕೆ 5.04 ಕೋಟಿ ರೂ., 2025-26ನೇ ಸಾಲಿನಲ್ಲಿ 54.93 ಲಕ್ಷ ರೂ.ಗಳನ್ನು ಸರಕಾರ ಕೈಮಗ್ಗ ನೇಕಾರರ ಸಹಕಾರ ಸಂಘ ಹಾಗೂ ಕೈಮಗ್ಗ ಮಹಾಮಂಡಳಗಳಿಗೆ ನೀಡಲಾಗಿದೆ ಎಂದು ಶಿವಾನಂದ ಪಾಟೀಲ್ ತಿಳಿಸಿದರು.

ವಿದ್ಯುತ್ ಮಗ್ಗಗಳಿಗೆ ಹತ್ತು ಎಚ್ಪಿವರೆಗೆ ಪ್ರತಿಶತ ನೂರರಷ್ಟು ವಿದ್ಯುತ್ ರಿಯಾಯಿತಿ ನೀಡಲಾಗಿದೆ. 10.1 ರಿಂದ 20 ಎಚ್ಪಿ ವರೆಗಿನ ಮಗ್ಗಗಳಿಗೆ ಪ್ರತಿ ಯೂನಿಟ್‌ಗೆ 1.25 ರೂ.ಗಳಂತೆ ರಿಯಾಯಿತಿ ದರದಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಇದುವರೆಗೆ ವಿದ್ಯುತ್ ಸಹಾಯ ಯೋಜನೆಗೆ 252.97 ಕೋಟಿ ರೂ. ಗಳನ್ನು ಜವಳಿ ಇಲಾಖೆಯಿಂದ ಇಂಧನ ಇಲಾಖೆಗೆ ಭರಿಸಲಾಗಿದೆ ಎಂದು ಹೇಳಿದರು.

ಕಲಬುರಗಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಭಾಗಿತ್ವದಲ್ಲಿ ಸಮಗ್ರ ಜವಳಿ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದ್ದು, ಮೂಲ ಸೌಕರ್ಯ ಕಲ್ಪಿಸಲು 390.26 ಕೋಟಿ ರೂ. ಬಿಡುಗಡೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಜವಳಿ ಪಾರ್ಕ್‌ಗೆ 180 ಮೆಗಾ ವ್ಯಾಟ್ ವಿದ್ಯುತ್ ಪೂರೈಕೆಗೆ ಪವರ್ ಸ್ಟೇಷನ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ಯೋಜನೆಗೆ ನಂದಿಕೂರು ಗ್ರಾಮದ ಎಸ್ಟಿಪಿಯಿಂದ 12.09 ಎಂಎಲ್‌ಡಿ ನೀರು ಪೂರೈಕೆ ಮಾಡಲು ಸಮೀಕ್ಷೆ ಕೈಗೊಂಡಿದ್ದು, ಪೈಪ್‌ಲೈನ್‌ ಡಿಸೈಜ್ ಕಾರ್ಯ ಪ್ರಗತಿಯಲ್ಲಿದೆ ಎಂದು ಶಿವಾನಂದ ಪಾಟೀಲ್ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕ ಕೆ.ಗೋಪಾಲಯ್ಯ, ಕಾವೇರಿ ಹ್ಯಾಂಡ್ಲೂಮ್ ಅಧ್ಯಕ್ಷ ಜೆ.ಬಿ.ಗಣೇಶ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಜವಳಿ ಅಭಿವೃದ್ಧಿ ಆಯುಕ್ತೆ ಕೆ.ಜ್ಯೋತಿ, ಕೆಎಸ್ಟಿಐಡಿಸಿ ಅಧ್ಯಕ್ಷ ಚೇತನ್, ಉಪಾಧ್ಯಕ್ಷ ಬಾಲಾಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News