ಕನ್ನಡಿಗನೊ ತಮಿಳಿಗನೊ ಆಗುವ ಮೊದಲು ಮನುಷ್ಯನಾಗಬೇಕಿದೆ : ನಟ ಕಿಶೋರ್ ಕುಮಾರ್
ಕಿಶೋರ್ ಕುಮಾರ್
ಬೆಂಗಳೂರು: ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ನಿಜ ನಮ್ಮ ಮಾತುಗಳ ಪರಿಣಾಮದ ಅರಿವೂ ನಮಗಿರಬೇಕಾದುದು ಬಹಳ ಮುಖ್ಯ. ಆದರೆ ಇನ್ನೊಬ್ಬರ ಅಭಿಪ್ರಾಯ ನಮ್ಮ ಕೈಯೊಳಗಿಲ್ಲ ಎಂದು ಬಹುಭಾಷಾ ನಟ ಕಿಶೋರ್ ಕುಮಾರ್ ಹೇಳಿದ್ದಾರೆ.
ಕನ್ನಡ ಮೊದಲೋ, ತಮಿಳು ಮೊದಲೋ ಎಂಬ ಚರ್ಚೆಗೆ ಕಿಚ್ಚು ಹಚ್ಚಿದ ನಟ ಕಮಲ್ ಹಾಸನ್ ಅವರ ಹೇಳಿಕೆ ಸಂಬಂಧ ಪತ್ರಿಕೆಯೊಂದರ ತುಣುಕನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿರುವ ಕಿಶೋರ್ ಅವರು, ʼನಾನು ಯಾರ ಹೇಳಿಕೆಯನ್ನೂ ಸಮರ್ಥಿಸುತ್ತಿಲ್ಲ (ಕೆಲವು ಮಾಧ್ಯಮಗಳಲ್ಲಿ ಬಿಂಬಿಸುತ್ತಿರುವ ಹಾಗೆ). ಹಾಗೇ ನನ್ನ ಭಾಷೆ, ಮತ್ತದರ ಪರಂಪರೆ ಯಾರ ಹೇಳಿಕೆಯಿಂದಲೂ ಅವಮಾನಿತವಾಗಿಬಿಡುವಷ್ಟು ದುರ್ಬಲವೂ ಅಲ್ಲ. ಹಾಗಿರುವಾಗ ನಾನು ಹುಡುಕುವುದು ನಮ್ಮ ಹಿಡಿತದಲ್ಲಿರುವ ನಮ್ಮ ಪ್ರತಿಕ್ರಿಯೆಯನ್ನು ಸಾಧ್ಯವಾದಷ್ಟು ಸಂಯಮಭರಿತ ಮತ್ತು ಆರೋಗ್ಯಕರವಾಗಿಸಬಲ್ಲ ಸಾಧ್ಯತೆಗಳನ್ನಷ್ಟೆʼ ಎಂದು ಹೇಳಿದ್ದಾರೆ.
ʼದ್ರಾವಿಡರು ಮತ್ತು ದ್ರಾವಿಡ ಭಾಷೆಗಳು ಈಗಾಗಲೇ ಬಂಡವಾಳಶಾಹಿ, ಹಿಂದಿ ಹೇರಿಕೆ, ವಲಸೆ, ಡಿಲಿಮಿಟೇಶನ್ ನಂತಹ ಉಳಿವಿನ ಹಲವಾರು ಸಮಸ್ಯೆಗಳನ್ನೆದುರಿಸುತ್ತಿರುವಾಗ ತಮ್ಮ ತಮ್ಮಲ್ಲೇ ಬಡಿದಾಡಿಕೊಳ್ಳುವ ಪರಿಸ್ಥಿತಿ ಬರದಂತೆ ಕಾಯ್ದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಇಂಥ ಪರಿಸ್ಥಿತಿಯಲ್ಲಿ ಸ್ಥಳೀಯ ಭಾಷೆಗಳಲ್ಲವೂ ಮೇಲು ಕೀಳು ಭಾವನೆಯನ್ನು ತೊಲಗಿಸಿ ಸರಿಸಮ ನಿಂತು ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಒಗ್ಗೂಡಬೇಕು ʼ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇಂದು ಇಡೀ ದೇಶ, ಒಡೆದಾಳುವ ದ್ವೇಷದ ರಾಜಕಾರಣದ ಬಲಿಪಶುವಾಗಿದೆ. ನಮ್ಮ ಅತಿ ಭಾವುಕತೆಯನ್ನು ಬಳಸಿ ದೇಶ, ಧರ್ಮ, ಜಾತಿಗಳ ನಡುವೆ ಕಿಚ್ಚೆಬ್ಬಿಸಿ, ಕ್ರೌರ್ಯ ಹಿಂಸೆಗಳಿಗೆ ಜನರನ್ನು ದೂಡಿ, ಜನರ ನೆಮ್ಮದಿ ಕೆಡಿಸಿ, ಮೂಲಭೂತ ಸಮಸ್ಯೆಗಳಿಂದ ಬೇರೆಡೆಗೆ ಸೆಳೆಯುತ್ತಿರುವುದು ಕಣ್ಣೆದುರೇ ಇರುವಾಗ ಭಾಷೆಯನ್ನೂ ಆ ರಾಜಕೀಯಕ್ಕೆ ಸಿಲುಕಿಸಬೇಕೆ? ಎಂದು ಪ್ರಶ್ನಿಸಿದ್ದಾರೆ.
ಕನ್ನಡಿಗರು ಶಾಂತಿಪ್ರಿಯರು, ಸಹೃದಯರು. ಭಾವೋದ್ರೇಕಕ್ಕೆ ಆಸ್ಪದ ಕೊಡದೆ ಶಾಂತಿಯ, ಪ್ರೀತಿಯ ಮಾತಾಡಿದ ಕನ್ನಡ ಕಲಾಪ್ರತಿನಿಧಿ ಶಿವಣ್ಣನವರನ್ನು ಆಧಾರವಿಲ್ಲದೇ ದೂಷಿಸುವ ಬದಲು, ಸಾವಿರಾರು ಜನರ ಹೊಟ್ಟೆಪಾಡಿನ ಕೆಲಸವಾದ ಸಿನಿಮಾ ವಿರುದ್ಧ ಬಂಡೇಳುವ ಬದಲು, ದೇಶ ಕಂಡ ಅದ್ಭುತ ಪ್ರತಿಭೆ, ಇದುವರೆಗೂ ತನ್ನ ಕೆಲಸಗಳ ಮೂಲಕ ಸಂವಿಧಾನಿಕ ಮೌಲ್ಯಗಳಿಗೆ ಬದ್ಧರಾಗಿ ನಿಂತ ಕಮಲ್ ಹಾಸನ್ ಅವರನ್ನು ಇಷ್ಟೂ ದಿನ ಅಪರಿಮಿತ ಗೌರವದಿಂದ ಕಂಡ ನಾವು ಈಗಲೂ ಸಂಯಮದಿಂದ ವರ್ತಿಸಿ ಅವರ ಹೇಳಿಕೆ ಕನ್ನಡಕ್ಕೆ ಅಗೌರವ ತೋರುವ ಉದ್ದೇಶದಿಂದಲ್ಲವೆಂದು ನಂಬಿ ಆರೋಗ್ಯಕರ ಪ್ರಶ್ನೆ, ಚರ್ಚೆಗಳ ಮೂಲಕ ಅವರ ಹೇಳಿಕೆಯ ಹಿಂದಿನ ಆಧಾರವನ್ನು ತರ್ಕವನ್ನು ತಿಳಿದು ಸತ್ಯವನ್ನು ಆಧಾರಸಹಿತ ಮನದಟ್ಟು ಮಾಡಿಸಿ, ಭಿನ್ನಾಭಿಪ್ರಾಯಗಳನ್ನು ತಿಳಿಗೊಳಿಸಿಕೊಂಡು ದ್ರಾವಿಡ ಭಾಷೆಗಳ ನಡುವಿನ ಶಾಂತಿ ಸೌಹಾರ್ದ ಭ್ರಾತೃತ್ವವನ್ನು ಮೆರೆಯಬೇಕಿದೆ ಎಂದು ಹೇಳಿದ್ದಾರೆ.
ಇಂದು ನಾನು ಕನ್ನಡಿಗನೊ ತಮಿಳನೊ, ಒಕ್ಕಲಿಗನೊ ಬ್ರಾಹ್ಮಣನೊ, ಹಿಂದುವೊ ಮುಸಲ್ಮಾನನೊ, ಭಾರತೀಯನೊ ವಿದೇಶೀಯನೊ ಆಗುವ ಮೊದಲು ಮಾನವತೆಯನ್ನು ಮೆರೆದು ಮನುಷ್ಯನಾಗಬೇಕಿದೆ. ದೇಶ, ಧರ್ಮ, ಜಾತಿ, ಭಾಷೆಗಳ ಈ ಅಪಾಯಕಾರಿ ಅತಿ ಭಾವುಕತೆಯ ರಾಜಕೀಯದ ಬಗ್ಗೆ ಎಚ್ಚರದಿಂದಿದ್ದು, ವಿಶ್ವದ ಸೋದರ-ಸೋದರಿಯರೆಲ್ಲರೂ ಕೈಜೋಡಿಸಿ ಅಭಿವೃದ್ಧಿಯ ಕಡೆ ಸಾಗಬೇಕಿದೆ ಎಂದಿದ್ದಾರೆ.