ಕೊಲೆ ಬೆದರಿಕೆ ಆರೋಪ: ದರ್ಶನ್ ಅಭಿಮಾನಿಗಳು, ಫ್ಯಾನ್ ಪೇಜ್‍ಗಳ ವಿರುದ್ಧ ನಟ ಪ್ರಥಮ್ ದೂರು
ನಟ ಪ್ರಥಮ್ (Photo: Facebook)
ಬೆಂಗಳೂರು: ನಟ ದರ್ಶನ್ ಅಭಿಮಾನಿಗಳಿಂದ ವೈಯಕ್ತಿಕ ತೇಜೋವಧೆ ಹಾಗೂ ಕೊಲೆ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿ ಸಿ.ಕೆ. ಬಾಬಾ ಅವರಿಗೆ ನಟ ಪ್ರಥಮ್ ದೂರು ಸಲ್ಲಿಸಿದ್ದಾರೆ.
ಮಂಗಳವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿ ಸಿ.ಕೆ. ಬಾಬಾ ಅವರನ್ನು ಭೇಟಿಯಾಗಿ ದೂರು ನೀಡಿರುವ ಪ್ರಥಮ್, ದರ್ಶನ್ ಅವರೊಂದಿಗೆ ಜೈಲಿನ ಒಂದೇ ಬ್ಯಾರಕ್‍ನಲ್ಲಿದ್ದ ವ್ಯಕ್ತಿಯೊಬ್ಬ ನನ್ನನ್ನು ಉದ್ದೇಶಿಸಿ ‘ಬಾಸ್(ದರ್ಶನ್) ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತೀಯಾ’ ಎಂದು ಹೇಳಿ ಮಾರಕಾಸ್ತ್ರ ತೋರಿಸಿ ಚುಚ್ಚಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
500ಕ್ಕೂ ಹೆಚ್ಚು ಪೇಜ್‍ಗಳಿಂದ ತೇಜೋವಧೆ:
ಈ ಬೆಳವಣಿಗೆ ನಡುವೆ ನಟ ದರ್ಶನ್ ಅವರ ಅಧಿಕೃತ ಫ್ಯಾನ್ ಪೇಜ್‍ಗಳಾದ ಡಿ ಕಂಪನಿ, ಡಿ ಡೈನಾಸ್ಟಿ, ಡಿ ಕಿಂಗ್ ಡಮ್, ಡಿ ಯೂನಿವರ್ಸ್ ಮತ್ತು ಡೆವಿಲ್ ಕಿಂಗ್ ಡಮ್ ಸೇರಿದಂತೆ 500ಕ್ಕೂ ಹೆಚ್ಚು ಇನ್‍ಸ್ಟಾಗ್ರಾಮ್ ಪೇಜ್‍ಗಳಿಂದ ನನ್ನ ವೈಯಕ್ತಿಕ ತೇಜೋವಧೆಗೆ ಇಳಿದಿದ್ದಾರೆ. ಇಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ನನಗೆ ಜೀವಭಯವಿದ್ದು ರಕ್ಷಣೆಯ ಅಗತ್ಯವಿದೆ. ಘಟನೆ ಸಂಬಂಧ ಒಂದು ವಾರದಿಂದ ನನಗೆ ತೊಂದರೆ ಮಾಡಿದ್ದವರ ಬಗ್ಗೆ ಬುದ್ದಿ ಹೇಳಿಸಿ ರಾಜಿಯಾಗಲು ದರ್ಶನ್ ಆಪ್ತರು ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ಪ್ರಥಮ್ ತಿಳಿಸಿದ್ದಾರೆ.
ದೂರು ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರಥಮ್, ಸಿನಿಮಾವೊಂದರ ಆಹ್ವಾನದ ಮೇರೆಗೆ ದೊಡ್ಡಬಳ್ಳಾಪುರದ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮಕ್ಕೆ ಹೋಗಿದ್ದೆ. ಪೂಜೆ ಮುಗಿಸಿ ಹೊರಡುವಾಗ ಯಶಸ್ವಿನಿ ಹಾಗೂ ಬೇಕರಿ ರಘು ಸೇರಿದಂತೆ ಕೆಲ ಅಪರಿಚಿತರು ನನ್ನನ್ನು ಸುತ್ತುವರೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದರು. ‘ನನ್ನ ಬಾಸ್ (ದರ್ಶನ್) ಬಗ್ಗೆ ಮಾತನಾಡಿದ್ದೀಯಾ’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಬಳಿಯಿದ್ದ ಮಾರಕಾಸ್ತ್ರ ತೋರಿಸಿ ಚುಚ್ಚುವುದಾಗಿ ಭಯ ಬೀಳಿಸಿದ್ದಾರೆ. ಉಪಾಯದಿಂದ ಪ್ರಾಣ ಉಳಿಸಿಕೊಂಡು ಅಲ್ಲಿಂದ ಬಂದಿದ್ದೇನೆ ಎಂದು ವಿವರಿಸಿದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರ ಜಾಮೀನು ವಿಚಾರ ಸುಪ್ರೀಂಕೋರ್ಟ್‍ನಲ್ಲಿ ಇರುವುದರಿಂದ ಅವರಿಗೆ ತೊಂದರೆಯಾಗಬಹುದು ಎಂದು ಈವರೆಗೆ ಸುಮ್ಮನಿದ್ದೆ. ಇದನ್ನು ಅವರ ಅಂಧಾಭಿಮಾನಿಗಳು ಅರ್ಥ ಮಾಡಿಕೊಂಡಿಲ್ಲ. ಬೆದರಿಕೆ ಸಂಬಂಧ ದರ್ಶನ್ ಅವರ ಅಭಿಮಾನಿಗಳಿಗೆ ಬುದ್ದಿ ಹೇಳಲಿ. ಎಸ್ಪಿ ಕಚೇರಿಗೆ ಬಂದು ಹೇಳಿಕೆ ನೀಡಲಿ. ಅವರು ಬರುವ ತನಕವೂ ಉಪವಾಸ ಕೂರುತ್ತೇನೆ ಎಂದು ಪ್ರಥಮ್ ತಿಳಿಸಿದರು.