×
Ad

ಉಪೇಂದ್ರ ದಂಪತಿ ಮೊಬೈಲ್‍ಗಳು ಹ್ಯಾಕ್; ಹಣಕ್ಕೆ ಬೇಡಿಕೆ

ದೂರು ದಾಖಲು

Update: 2025-09-15 13:01 IST

ಬೆಂಗಳೂರು: ಚಿತ್ರನಟ ಉಪೇಂದ್ರ ಹಾಗೂ ಪತ್ನಿ ಪ್ರಿಯಾಂಕಾ ಉಪೇಂದ್ರರ ಮೊಬೈಲ್ ಫೋನ್‍ಗಳನ್ನು ಸೈಬರ್ ವಂಚಕರು ಹ್ಯಾಕ್ ಮಾಡಿರುವ ಬಗ್ಗೆ ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಉಪೇಂದ್ರ ದಂಪತಿ ಸೋಮವಾರ ದೂರು ಸಲ್ಲಿಸಿದ್ದಾರೆ.

ಸೋಮವಾರ ಈ ಸಂಬಂಧ ಸಾಮಾಜಿಕ ಜಾಲತಾಣಗಳ ಮೂಲಕವೂ ಮಾಹಿತಿ ನೀಡಿರುವ ಉಪೇಂದ್ರ ಮತ್ತು ಪ್ರಿಯಾಂಕಾ, ‘ತಮ್ಮ ಹೆಸರು ಹೇಳಿಕೊಂಡು ಯಾರಾದರೂ ಹಣ ಕೇಳಿದರೆ ಕೊಡದಂತೆ’ ಮನವಿ ಮಾಡಿಕೊಂಡಿದ್ದಾರೆ.

ಪ್ರಕರಣ ವಿವರಣೆ: ಸೆ.15ರ ಬೆಳಗ್ಗೆ ಪ್ರಿಯಾಂಕಾ ಅವರಿಗೆ ಕರೆ ಮಾಡಿದ್ದ ಆರೋಪಿ, ‘ನಿಮ್ಮ ಆರ್ಡರ್ ಡಿಲಿವರಿ ಮಾಡಲು ವಿಳಾಸ ಸಿಗುತ್ತಿಲ್ಲ. ಈ ನಂಬರ್ ಡಯಲ್ ಮಾಡಿ ಖಚಿತಪಡಿಸಿದರೆ ಡೆಲಿವರಿ ಮಾಡುತ್ತೇವೆ’ ಎಂದು ಹ್ಯಾಶ್‍ಟ್ಯಾಗ್ ಸಹಿತ ಒಂದು ನಂಬರ್ ಹೇಳಿದ್ದಾನೆ. ಆ ನಂಬರ್ ಡಯಲ್ ಮಾಡುವಷ್ಟರಲ್ಲಿ ಪ್ರಿಯಾಂಕಾ ಅವರ ಫೋನ್ ಹ್ಯಾಕ್ ಆಗಿದೆ.ಫೋನ್‌ ನಲ್ಲಿ ಸಮಸ್ಯೆ ಇರಬಹುದು ಎಂದುಕೊಂಡ ಪ್ರಿಯಾಂಕಾ ಅವರು ಪತಿ ಉಪೇಂದ್ರ ಹಾಗೂ ಕುಟುಂಬದ ಪರಿಚಿತರಾದ ಮಹಾದೇವ್ ಎಂಬುವರ ಫೋನ್‍ಗಳಿಂದ ಅದೇ ನಂಬರ್ ಡಯಲ್ ಮಾಡಿದ್ದಾರೆ. ಕೂಡಲೇ ಆ ಫೋನ್‍ಗಳೂ ಹ್ಯಾಕ್ ಆಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಫೋನ್ ನಂಬರ್ ಹ್ಯಾಕ್ ಆದ ಬಳಿಕ ನಮ್ಮಿಬ್ಬರ ನಂಬರ್ ಗಳಿಂದ ಹಣ ಕೇಳಿಕೊಂಡು ಪರಿಚಿತರಿಗೆ ಮೆಸೇಜ್‍ಗಳು ಹೋಗಿವೆ. ಖಚಿತಪಡಿಸಲು ಅವರು ಕರೆ ಮಾಡಿದರೂ ನಮಗೆ ತಲುಪುತ್ತಿಲ್ಲ. ಕಾಲ್ ಫಾರ್ವರ್ಡ್ ಮಾಡಿಟ್ಟಿದ್ದಾರೆ. ನಮ್ಮ ಪರಿಚಿತರು ಮೂರ್ನಾಲ್ಕು ಜನ ತುರ್ತು ಅಗತ್ಯವಿರಬಹುದು ಎಂದು ಸುಮಾರು 50 ಸಾವಿರ ರೂ.ನಷ್ಟು ಹಣವನ್ನೂ ವರ್ಗಾಯಿಸಿದ್ದಾರೆ. ನನ್ನ ಮಗ ಸಹ ಹಣ ವರ್ಗಾಯಿಸಿದ್ದಾನೆ. ಈ ರೀತಿಯ ಮೆಸೇಜ್‍ಗಳು ಬಂದರೆ ಯಾರೂ ದಯವಿಟ್ಟು ನಂಬಿ ಹಣ ಕಳುಹಿಸಬೇಡಿ ಎಂದು ನಟ ಉಪೇಂದ್ರ ತಿಳಿಸಿದ್ದಾರೆ.

ಮನೆಗೆ ಆರ್ಡರ್ ಮಾಡಿದ್ದ ಒಂದಷ್ಟು ವಸ್ತುಗಳು ಬರಬೇಕಿತ್ತು. ನಾನು ಅದೇ ಕಾಲ್ ಇರಬಹುದು ಎಂದು ಉತ್ತರಿಸಿದಾಗ, ಈ ರೀತಿ ಹ್ಯಾಕ್ ಮಾಡಿದ್ದಾರೆ. ಸ್ವಲ್ಪ ಅನುಮಾನವಿತ್ತು, ಆದರೆ, ನಾನು ಗಡಿಬಿಡಿಯಲ್ಲಿ ಅವರು ಹೇಳಿದ ನಂಬರ್ ಡಯಲ್ ಮಾಡಿದಾಗ ಈ ರೀತಿ ಆಗಿದೆ. ನಂತರ ನನ್ನ ವಾಟ್ಸಪ್ ಮೂಲಕ ಸಂಪರ್ಕದಲ್ಲಿದ್ದವರಿಗೆ, ‘ತುರ್ತಾಗಿ ಬೇಕಿದೆ, 2 ಗಂಟೆಯೊಳಗೆ ವಾಪಾಸ್ ಕಳಿಸುತ್ತೇವೆ’ ಎಂದು ಹಣ ಕಳಿಸುವಂತೆ ಮೆಸೇಜ್ ಮಾಡಿದ್ದಾರೆ. ದಯವಿಟ್ಟು ಈ ರೀತಿಯ ಬೇಡಿಕೆಗಳನ್ನು ನಂಬಿ ಹಣ ಕಳುಹಿಸಬೇಡಿ ಎಂದು ಪ್ರಿಯಾಂಕಾ ಮನವಿ ಮಾಡಿದ್ದಾರೆ.

Full View

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News