ಬೆಂಗಳೂರು : ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಜಾಲದ ವಿರುದ್ಧ ಕೃಷಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

ರಾಜ್ಯದ ವಿವಿಧೆಡೆ ಕೃಷಿ ಇಲಾಖೆ (ಜಾಗೃತ) ಅಧಿಕಾರಿಗಳು ದಾಳಿ ನಡೆಸಿ, ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕೀಟನಾಶಕಗಳನ್ನು ಜಪ್ತಿ ಮಾಡಿದ್ದಾರೆ.

ಹೆಚ್ಚುವರಿ ನಿರ್ದೇಶಕ ಹಾಗೂ ಜಂಟಿ ನಿರ್ದೇಶಕ (ವಿಜಿಲೆನ್ಸ್) ಅವರ ಮಾರ್ಗದರ್ಶನದಲ್ಲಿ ಉಪನಿರ್ದೇಶಕ (ವಿಜಿಲೆನ್ಸ್) ನೇತೃತ್ವದ ಜಾಗೃತ ದಳದ ಅಧಿಕಾರಿಗಳು ಬೆಂಗಳೂರು, ಮೈಸೂರು ಹಾಗೂ ಬಳ್ಳಾರಿಯಲ್ಲಿ ದಾಳಿ ನಡೆಸಿ, ಪರವಾನಗಿ ಪಡೆಯದೆ ಮಾರಾಟ ಮಾಡುತ್ತಿದ್ದ ಕೀಟನಾಶಕ ಹಾಗೂ ರಸಗೊಬ್ಬರಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನ ಸೀಗೆಹಳ್ಳಿ ಹಾಗೂ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿಯಲ್ಲಿ ದಿಢೀರ್ ದಾಳಿ ನಡೆಸಿದ ಕೃಷಿ ಇಲಾಖೆ ಅಧಿಕಾರಿಗಳು ಯಾವುದೇ ಅಧಿಕೃತ ಉತ್ಪಾದನಾ ಪರವಾನಗಿ ಇಲ್ಲದೆ ದಾಸ್ತಾನು ಮಾಡಿದ್ದ ಮತ್ತು ಮಾರಾಟ ಮಾಡಲು ಯತ್ನಿಸಿದ್ದ ಕೀಟನಾಶಕಗಳನ್ನು ವಶಪಡಿಸಿಕೊಂಡಿದ್ದಾರೆ.

ಮಾದನಾಯಕನಹಳ್ಳಿಯ ರಾಮಚಂದ್ರ ಪಲ್ವರೈಸರ್ ಅಂಡ್ ಇಂಡಸ್ಟ್ರೀಸ್  ಮೇಲೆ ದಾಳಿ ನಡೆಸಿದಾಗ ಲೇಬಲ್ ಉಲ್ಲಂಘನೆ, ಉತ್ಪಾದನಾ ಪರವಾನಗಿ ಇಲ್ಲದೆ ಕೀಟನಾಶಕಗಳ ಮಾರಾಟ ಹಾಗೂ ದಾಸ್ತಾನು ಇರಿಸಿರುವುದು ಪತ್ತೆಯಾಗಿದೆ. ಸ್ಥಳದಲ್ಲಿ ಕ್ಲೋರ್‌ ಪೈರಿಫಾಸ್, ಮ್ಯಾಲಥಿಯಾನ್ ಮತ್ತು ಬೈಫೆನ್ ಥ್ರಿನ್ ಸೇರಿ ಅಂದಾಜು 3,12,250 ರೂ. ಮೌಲ್ಯದ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಕೃಷಿ ಜಾಗೃತ ಕೋಶ ಬೆಂಗಳೂರು ವಿಭಾಗದ ಉಪ ನಿರ್ದೇಶಕ ಅಶೋಕ್ ಟಿ.ಎನ್ ನೇತೃತ್ವದ ತಂಡ ಭಾಗವಹಿಸಿತ್ತು.

ಬಳ್ಳಾರಿಯಲ್ಲಿ ಅ.13 ರಂದು ಯಾವುದೇ ಅಧಿಕೃತ ರಸಗೊಬ್ಬರ ಪರವಾನಗಿ ಹೊಂದಿಲ್ಲದೇ ಸಾವಯವ ಗೊಬ್ಬರ ಮತ್ತು ಜೈವಿಕ ಕೀಟನಾಶಕಮಾರಾಟ ಮಾಡುತ್ತಿದ್ದ ಮಂಜುಶ್ರೀ ಮಾರ್ಕೆಟಿಂಗ್ ಔಟ್‍ಲೆಟ್ ಮೇಲೆ ದಾಳಿ ನಡೆಸಲಾಗಿದೆ. ಕೃಷಿ ಇಲಾಖೆಯ ಜಾಗೃತ ದಳದ ಸಹಾಯಕ ನಿರ್ದೇಶಕರು, ಬಳ್ಳಾರಿ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಸಿಬ್ಬಂದಿ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಒಟ್ಟು 61.20 ಲಕ್ಷ ರೂ. ಮೌಲ್ಯದ ಸಾಮಗ್ರಿಯನ್ನು ಜಪ್ತಿ ಮಾಡಿದ್ದಾರೆ.

ಮೈಸೂರು ತಾಲೂಕು ಕಸಬಾ ಹೋಬಳಿಯ ಬಂಡಿಪಾಳ್ಯದಲ್ಲಿರುವ ಶ್ರೀ ವೈಷ್ಞವಿ ಎಂಟರ್ ಪ್ರೈಸಸ್ ಮೇಲೆ ದಾಳಿ ನಡೆಸಿದ ಅಧಿಕಾರಿಗಳು 4,26,883 ರೂ.ಮೌಲ್ಯದ ಅಧಿಸೂಚನೆಗೊಳಪಡದ ರಸಗೊಬ್ಬರ ಮಾರಾಟವನ್ನು ಪತ್ತೆ ಹಚ್ಚಿದ್ದಾರೆ. ಶೇ.100ರಷ್ಟು ನೀರಿನಲ್ಲಿ ಕರಗುವ ರಸಗೊಬ್ಬರ (340 ಲೀಟರ್) ಜಪ್ತಿ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಕೃಷಿ ಇಲಾಖೆ ಸಹಾಯಕ( ಎನ್ ಫೋರ್ಸ್ ಮೆಂಟ್) ನಿರ್ದೇಶಕ ತೇಜಸ್ವಿ ಎಲ್. ನೇತೃತ್ವದ ತಂಡ ಭಾಗವಹಿಸಿತ್ತು.

ರೈತರಿಗೆ ಕೃಷಿ ಇಲಾಖೆ ಎಚ್ಚರಿಕೆ: ಅಧಿಕೃತ ಪರವಾನಗಿ ಇಲ್ಲದೇ, ರೈತರಿಗೆ ನಕಲಿ ಕೀಟನಾಶಕ ಹಾಗೂ ರಸಗೊಬ್ಬರಗಳನ್ನು ಮಾರಾಟ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿರುವ ಇಲಾಖೆಯ ಹಿರಿಯ ಅಧಿಕಾರಿಗಳು, ರೈತರು ಯಾವುದೇ ಕೃಷಿ ಉತ್ಪನ್ನಗಳನ್ನು ಖರೀದಿಸುವಾಗ ಅಧಿಕೃತ ಪರವಾನಗಿ ಹೊಂದಿದ ಡೀಲರ್‌ಗಳ ಹತ್ತಿರವೇ ಬಿಲ್ ಪಡೆದು ಖರೀದಿಸುವಂತೆ ಮನವಿ ಮಾಡಿದ್ದಾರೆ.

‘ರೈತರಿಗೆ ನಕಲಿ ಬಿತ್ತನೆ ಬೀಜ, ಕೀಟನಾಶಕ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೃಷಿ ಜಾಗೃತ ದಳದ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅದರ ಭಾಗವಾಗಿಯೇ ಕಳೆದ ಎರಡು ತಿಂಗಳಿಂದ ನಿರಂತರವಾಗಿ ರಸಗೊಬ್ಬರ ಹಾಗೂ ಕೀಟನಾಶಕ ಮಳಿಗೆಗಳ ಮೇಲೆ ದಾಳಿ ನಡೆಸುತ್ತಿದ್ದು, ಪರವಾನಗಿ ಇಲ್ಲದೇ ಮಾರಾಟ ಮಾಡುವವರಿಗೆ ದಂಡದ ಜೊತೆಗೆ ಕಾನೂನು ಕ್ರಮವನ್ನೂ ಜರುಗಿಸಲಾಗುತ್ತಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದೆ. ಇದನ್ನೇ ನೆಪ ಮಾಡಿಕೊಂಡು ರೈತರನ್ನು ವಂಚಿಸುವವರ ಕಂಪನಿಗಳು ಹಾಗೂ ಮಾರಾಟಗಾರರ ವಿರುದ್ದ ಮುಲಾಜಿಲ್ಲದೇ ಕ್ರಮ ಜರುಗಿಸಲಾಗುತ್ತದೆ’

-ಪಿ.ಎಂ.ನರೇಂದ್ರ ಸ್ವಾಮಿ, ಕೃಷಿ ಸಚಿವ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor