‘ಗೃಹಲಕ್ಷ್ಮಿ’ ಮೂವತ್ತ ಮೂರನೇ ಕಂತಿನ 2,482 ಕೋಟಿ ರೂ. ಬಿಡುಗಡೆ : ದಿನೇಶ್ ಗೂಳಿಗೌಡ
‘ಬರಗಾಲದಲ್ಲಿ ಬಡವರಿಗೆ ನೆರವಾದ ಗೃಹಲಕ್ಷ್ಮಿ’
ಬೆಂಗಳೂರು : ಗೃಹಲಕ್ಷ್ಮಿ ಯೋಜನೆಯ ಮೂವತ್ತ ಮೂರನೇ ಕಂತಿನ 2,482 ಕೋಟಿ ರೂ. ಹಣವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಡುಗಡೆ ಮಾಡಿದ್ದಾರೆ. ಇನ್ನೆರಡು ದಿನಗಳಲ್ಲಿ ರಾಜ್ಯದ 1.24ಕೋಟಿ ಮಹಿಳೆಯರಿಗೆ 79,433ಕೋಟಿ ರೂ.ಹಣ ತಲುಪಲಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
ಬುಧವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೂ 32 ಕಂತುಗಳಲ್ಲಿ 64ಸಾವಿರ ರೂ.ಹಣ ತಲುಪಿದೆ. ಈಗ 33ನೇ ಕಂತಿನ ಹಣ ಬಿಡುಗಡೆ ಆಗಿದ್ದು ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲಿದೆ. ಈ ಮೂಲಕ ಪ್ರತಿ ಫಲಾನುಭವಿಗೆ 66ಸಾವಿರ ರೂ. ತಲುಪಿದಂತಾಗಲಿದೆ ಎಂದು ಹೇಳಿದ್ದಾರೆ.
ಬರಗಾಲದ ಈ ಸಂದರ್ಭದಲ್ಲಿ ಗೃಹಲಕ್ಷ್ಮಿ ಹಣ ಮಹಿಳೆಯರಿಗೆ ಆರ್ಥಿಕವಾಗಿ ಶಕ್ತಿ ನೀಡಲಿದೆ. ದಸರಾ ಹಬ್ಬದ ಈ ಸಂದರ್ಭದಲ್ಲಿ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಧನ್ಯವಾದಗಳು. ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಗೃಹಲಕ್ಷ್ಮಿ ಹಣವು ನೆರವಾಗಲಿದೆ ಎಂದು ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.