ಬೆಂಗಳೂರು : ರಾಜ್ಯದ ಇಂಜಿನಿಯರ್‌ಗಳು ತಮ್ಮ ಹೆಸರಿನ ಮೊದಲು ಗೌರವಸೂಚಕವಾಗಿ ಇಆರ್ (Er) ಎಂಬ ಪದನಾಮ ಬಳಸಲು ಅನುಮತಿ ನೀಡಿರುವ ಸರ್ಕಾರದ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರದಿಂದ ಹೈಕೋರ್ಟ್ ಪ್ರತಿಕ್ರಿಯೆ ಕೇಳಿದೆ.

ಇಂಜಿನಿಯರ್‌ಗಳ ದಿನಾಚರಣೆ (2026ರ ಸೆಪ್ಟೆಂಬರ್ 15) ಸಂದರ್ಭದಲ್ಲಿ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಬೆಂಗಳೂರಿನ ವಕೀಲ ಎನ್‌. ಬೀರಪ್ಪ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರತಿವಾದಿಗಳಾದ ರಾಜ್ಯ ಸರ್ಕಾರ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ನೋಟಿಸ್‌ ಜಾರಿಗೊಳಿಸಿ, ಆಕ್ಷೇಪಣೆಗಳನ್ನು ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ನವೆಂಬರ್ 16ಕ್ಕೆ ನಿಗದಿಪಪಡಿಸಿತು.

ಅರ್ಜಿಯಲ್ಲೇನಿದೆ?

ಭಾರತರತ್ನ ಸರ್‌ ಎಂ. ವಿಶ್ವೇಶ್ವರಯ್ಯ ಜನ್ಮದಿನದಂದು ಹೊರಡಿಸಲಾದ ಈ ಆದೇಶವು ಇಂಜಿನಿಯರ್‌ಗಳು ತಮ್ಮ ಹೆಸರಿನ ಮೊದಲು Er. ಬಳಸಲು ಅಧಿಕೃತ ಅನುಮತಿ ನೀಡುತ್ತದೆ. ಆದರೆ, ಸಂವಿಧಾನದ ಪರಿಚ್ಛೇದ 18(1) ಸೇನಾ ಅಥವಾ ಶೈಕ್ಷಣಿಕ ಗೌರವಗಳನ್ನು ಹೊರತುಪಡಿಸಿ, ರಾಜ್ಯವು ಯಾವುದೇ ಬಿರುದು ನೀಡುವುದನ್ನು ನಿರ್ಬಂಧಿಸುತ್ತದೆ. ಈ ವಿನಾಯಿತಿಗಳ ವ್ಯಾಪ್ತಿಗೆ Er. ಬರುವುದಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಸರ್ಕಾರವು ನಿರ್ದಿಷ್ಟ ವೃತ್ತಿಯವರಿಗೆ ಮಾತ್ರ ಅಧಿಕೃತ ಗೌರವಸೂಚಕ ಪದವನ್ನು ನೀಡಿದ್ದು, ಇಂತಹ ಗೌರವಸೂಚಕ ಪದ ಹೊಂದಿರದ ಇತರ ನಾಗರಿಕರನ್ನು ಕೆಳಮಟ್ಟದಲ್ಲಿ ಇರಿಸಿದಂತಾಗುತ್ತದೆ. ಇದು ಸಮಾನ ಸ್ಥಾನಮಾನದ ಹಕ್ಕಿಗೆ ಧಕ್ಕೆ ಉಂಟುಮಾಡುತ್ತದೆ. ಇಂಜಿನಿಯರ್‌ಗಳಿಗೆ ಮಾತ್ರ ಈ ರೀತಿಯ ಗೌರವ ಸೂಚಕ ಪದ ನೀಡಲು ಯಾವುದೇ ತರ್ಕಬದ್ಧ ಆಧಾರವಿಲ್ಲ. ವಕೀಲರು ಸೇರಿದಂತೆ ಇತರ ವೃತ್ತಿಪರರಿಗೆ ಇದೇ ಅವಕಾಶ ನಿರಾಕರಿಸಿರುವುದು ಸಂವಿಧಾನದ ಪರಿಚ್ಛೇದ 14ರ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

ಅರ್ಜಿದಾರರ ವೃತ್ತಿಪರ ಸ್ಥಾನಮಾನವು ಶಾಸನದ ಆಧಾರದಲ್ಲಿದೆ. ಆದರೆ, ಇಂಜಿನಿಯರ್‌ಗಳ ಪೂರ್ವಪ್ರತ್ಯಯವು ಕೇವಲ ಕಾರ್ಯಾಂಗದ ಆದೇಶವನ್ನು ಆಧರಿಸಿದೆ. ಕಾನೂನಿನ ಅಧಿಕಾರ ಅಗತ್ಯವಿರುವ ವಿಷಯವನ್ನು ಕಾರ್ಯಾಂಗದ ಸೂಚನೆಯ ಮೂಲಕ ಜಾರಿಗೊಳಿಸಲಾಗದು. ಇಂಜಿನಿಯರಿಂಗ್‌ ವೃತ್ತಿಗೆ ಯಾವುದೇ ಪೂರ್ವಪ್ರತ್ಯಯ ಅಥವಾ ಗೌರವಸೂಚಕ ಪದ ನೀಡಬೇಕಿದ್ದರೆ, ಅದನ್ನು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಪರಿಶೀಲಿಸಿ ಶಿಫಾರಸು ಮಾಡಬೇಕು. ಆ ಶಿಫಾರಸನ್ನು ಕೇಂದ್ರ ಸರ್ಕಾರ ಅನುಮೋದಿಸಬೇಕು ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.

ಸರ್ಕಾರದ ಈ ನಿರ್ಧಾರ ಮುಂದುವರಿದರೆ, ಭವಿಷ್ಯದ ದಿನಗಳಲ್ಲಿ ವೈದ್ಯರು, ಲೆಕ್ಕ ಪರಿಶೋಧಕರು, ವಾಸ್ತುಶಿಲ್ಪಿಗಳು, ಶಿಕ್ಷಕರು ಸೇರಿ ವಿವಿಧ ವೃತ್ತಿಪರರಿಂದಲೂ ಇದೇ ರೀತಿಯ ಗೌರವಸೂಚಕ ಪದಕ್ಕಾಗಿ ಬೇಡಿಕೆಗಳು ಉದ್ಭವಿಸಬಹುದು. ಪ್ರತಿ ರಾಜ್ಯವೂ ಪ್ರತ್ಯೇಕವಾಗಿ ಇಂತಹ ಬಿರುದುಗಳನ್ನು ನೀಡಲು ಆರಂಭಿಸಿದರೆ ಏಕರೂಪತೆ ನಾಶವಾಗಿ, ಅವು ಕಾರ್ಯಾಂಗದ ಮರ್ಜಿಗೆ ಒಳಪಟ್ಟ ಸಂಕೇತಗಳಾಗಬಹುದು ಎಂದು ಅರ್ಜಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor