ರೇಣುಕಾಸ್ವಾಮಿ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು 10ನೇ ಆರೋಪಿ ವಿನಯ್‌ ಬುಧವಾರ ಹಿಂಪಡೆದಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನು ನಗರದ 58ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶೆ ಸುಜಾತಾ ಎಂ. ಸಾಂಬ್ರಾಣಿ ಅವರು ಬುಧವಾರ ಮುಂದುವರಿಸಿದರು.

ವಿನಯ್‌ ಪರ ವಕೀಲರು ಹಾಜರಾಗಿ, ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು ಕೋರಿ ವಿನಯ್‌ 2026ರ ಆಗಸ್ಟ್ 6ರಂದು ಸಲ್ಲಿಸಿರುವ ಅರ್ಜಿಯನ್ನು ಹಿಂಪಡೆಯಾಗಲಾಗುವುದು ಎಂದು ತಿಳಿಸಿದರು. ಈ ಹೇಳಿಕೆ ದಾಖಲಿಸಿಕೊಂಡು ವಿನಯ್‌ ಅರ್ಜಿಯನ್ನು ವಜಾಗೊಳಿಸಿತು.

ದರ್ಶನ್‌ ಆಪ್ತನಾಗಿರುವ ವಿನಯ್ ರಾಜರಾಜೇಶ್ವರಿ ನಗರದಲ್ಲಿ ಸ್ಟೋನಿಬ್ರೂಕ್ಸ್‌ ಪಬ್‌ ನಡೆಸುತ್ತಿದ್ದರು. ಪ್ರಕರಣದಲ್ಲಿ 10ನೇ ಆರೋಪಿಯಾಗಿದ್ದು, ತನ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಕೋರಿ 2026ರ ಆಗಸ್ಟ್ 6ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಬುಧವಾರ ಹಿಂಪಡೆದರು.

ಇದೇ ಪ್ರಕರಣದ 14ನೇ ಆರೋಪಿಯಾಗಿರುವ ಪ್ರದೂಷ್‌ ರಾವ್ ಅವರು ಆಗಸ್ಟ್ 5ರಂದು ಮಾಫಿ ಸಾಕ್ಷಿಯಾಗಿ ಕೋರಲು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿತ್ತು.

ಇದರಿಂದ ಪ್ರದೂಷ್ 2026ರ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 7ರವರೆಗೆ ಆರು ದಿನ ಸುಮಾರು 20 ಗಂಟೆಗಳ ಕಾಲ 161 ಪುಟಗಳಷ್ಟು ಮಾಫಿ ಸಾಕ್ಷ್ಯ ನುಡಿದಿದ್ದರು. ದರ್ಶನ್‌ ಸೇರಿದಂತೆ ಎಲ್ಲ ಆರೋಪಿಗಳು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಹಿಸಿದ ಪಾತ್ರವನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor