ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಗಮನ ಸೆಳೆದ ‘ಏರ್ ಟ್ಯಾಕ್ಸಿ!’
ಬೆಂಗಳೂರು : ಎಲೆಕ್ಟ್ರಿಕ್ ಬೈಕ್, ಎಲೆಕ್ಟ್ರಿಲ್ ಸ್ಕೂಟರ್, ಎಲೆಕ್ಟ್ರಿಲ್ ಕಾರು, ಎಲೆಕ್ಟ್ರಿಲ್ ಬಸ್ ಹೀಗೆ ಎಲೆಕ್ಟ್ರಿಲ್ ಆಧಾರಿತ ವಿವಿಧ ವಾಹನಗಳು ಈಗಾಗಲೇ ರಸ್ತೆಗಳಿದು ಓಡಾಡುತ್ತಿವೆ. ಈ ನಡುವೆ ಈಗ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ವಸ್ತು ಪ್ರದರ್ಶನ ಕೇಂದ್ರದಲ್ಲಿ ಎಲೆಕ್ಟ್ರಿಲ್ ಹೆಲಿಕಾಪ್ಟರ್ ಅರ್ಥಾತ್ ವಿದ್ಯುತ್ ಚಾಲಿತ ‘ಏರ್ ಟ್ಯಾಕ್ಸಿ’ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದೆ.
ಈ ಏರ್ ಟ್ಯಾಕ್ಸಿಯನ್ನು ನೋಡಲು ಜನರು ಹೆಚ್ಚಿನ ಉತ್ಸಾಹ ತೋರಿಸಿದರು. ಅಲ್ಲದೆ, ಸಾಕಷ್ಟು ಮಂದಿ ಸೆಲ್ಫಿ ಕ್ಲಿಕ್ಕಿಸಿಕೊಂಡ ದೃಶ್ಯವೂ ಕಂಡುಬಂದಿತು. ಸರಳ ಏವಿಯೇಷನ್ ಎಂಬ ಸಂಸ್ಥೆ ಸಿದ್ದಪಡಿಸಿರುವ ಹೆಲಿಕಾಪ್ಟರ್ ಮಾದರಿ ಹೋಲುವ ಈ ‘ಏರ್ ಟ್ಯಾಕ್ಸಿ’ ಈಗಾಗಲೇ ಅಮೆರಿಕ, ಯುರೋಪ್, ಚೀನಾ, ಯುಕೆಯಲ್ಲಿ ಮಾತ್ರ ಲಭ್ಯವಿತ್ತು. ಈಗ ಭಾರತದಲ್ಲೂ ‘ಏರ್ ಟ್ಯಾಕ್ಸಿ’ ಚಾಲನೆಗೆ ಸಿದ್ದವಾಗಿದ್ದು, ರಕ್ಷಣಾ ಇಲಾಖೆಯಿಂದ ಗ್ರೀನ್ ಸಿಗ್ನಲ್ ಸಿಕ್ಕರೆ 2027ಕ್ಕೆ ಈ ಏರ್ ಟ್ಯಾಕ್ಸಿ ಹಾರಾಟ ಶುರುವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಏರ್ ಟ್ಯಾಕ್ಸಿಯ ವಿಶೇಷತೆ ಏನು: ಸರಳ ಏವಿಯೆಷನ್ ಎಂಬ ಸಂಸ್ಥೆ ತಯಾರಿಸಿದ ಈ ಏರ್ ಟ್ಯಾಕ್ಸಿ ಸಂಪೂರ್ಣ ಬ್ಯಾಟರಿ ಚಾಲಿತವಾಗಿದೆ. 20 ನಿಮಿಷಗಳ ಕಾಲ ಬ್ಯಾಟರಿ ಚಾರ್ಜ್ ಮಾಡಿದರೆ ಈ ಹೆಲಿಕಾಪ್ಟರ್ ನಿಗದಿತ ಸ್ಥಳಕ್ಕೆ ಹಾರಾಡುತ್ತದೆ. ಪೈಲೆಟ್ ಸೇರಿ ಒಟ್ಟು 7 ಜನರು ಕುಳಿತುಕೊಳ್ಳಲು ಇದರಲ್ಲಿ ಆಸನಗಳಿವೆ. ಗಂಟೆಗೆ 250 ಕಿ.ಮೀ. ವೇಗದಲ್ಲಿ ಪ್ರಯಾಣ ಮಾಡುವಂತೆ ಈ ಹೆಲಿಕಾಪ್ಟರ್ ಅಭಿವೃದ್ದಿ ಪಡಿಸಲಾಗಿದ್ದು, ಒಮ್ಮೆ 3 ಗಂಟೆ ಕಾಲ ಚಾರ್ಜ್ ಮಾಡಿದರೆ ಸುಮಾರು 180 ಕಿಲೋಮೀಟರ್ ಮೈಲೇಜ್ ಕೊಡುತ್ತದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕರು ತಿಳಿಸಿದ್ದಾರೆ.