ರಾಜ್ಯಪಾಲರನ್ನು ಬಿಟ್ಟು ಹೊರಟ ವಿಮಾನ: ಏರ್ ಏಷ್ಯಾ ಸಂಸ್ಥೆಗೆ ಪತ್ರ; ಕ್ಷಮೆಯಾಚಿಸಿದ ಸಂಸ್ಥೆ
ಬೆಂಗಳೂರು: ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿಗದಿತ ಸಮಯಕ್ಕೂ ಮುನ್ನವೇ ‘ತಡವಾಗಿ ಬಂದರು’ ಎಂಬ ಕಾರಣಕ್ಕೆ ಹೈದರಾಬಾದ್‍ಗೆ ಪ್ರಯಾಣಿಸಬೇಕಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನೆ ಬಿಟ್ಟು ವಿಮಾನವು ಪ್ರಯಾಣ ಬೆಳೆಸಿದ್ದು, ಈ ಸಂಬಂಧ ಏರ್ ಏಷ್ಯಾ ಸಂಸ್ಥೆಗೆ ಪತ್ರ ಬರೆಯಲಾಗಿದೆ.
ಜು.27ರಂದು, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಪೂರ್ವ ನಿಗದಿತ ಸಭೆಗೆ ಹಾಜರಾಗಲು ಹೈದರಾಬಾದ್‍ಗೆ ಪ್ರಯಾಣಿಸಲು ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಮಧ್ಯಾಹ್ನ 2 ಗಂಟೆಗೆ ಏರ್ ಏಷ್ಯಾ ವಿಮಾನದ ಮೂಲಕ ಹೈದರಾಬಾದ್‍ಗೆ ತೆರಳಬೇಕಿತ್ತು.
ವಿಮಾನ ನಿಲ್ದಾಣಕ್ಕೆ ಬಂದ ರಾಜ್ಯಪಾಲರನ್ನು ವಿಐಪಿ ಲಾಂಜ್‍ನಲ್ಲಿ ಕುಳ್ಳಿರಿಸಿದ ಅಧಿಕಾರಿಗಳು, ಅವರ ಲಗೇಜ್‍ಗಳನ್ನು ವಿಮಾನದಲ್ಲಿ ಇರಿಸಲು ಏರ್ ಏಷ್ಯಾದ ಸಿಬ್ಬಂದಿಗೆ ಹಸ್ತಾಂತರಿಸಿದ್ದರು. ಲಗೇಜ್ ಹಾಕಿಸಿಕೊಂಡ ವಿಮಾನದ ಸಿಬ್ಬಂದಿ, ಅವರನ್ನು ಬಿಟ್ಟು ಹೈದರಾಬಾದ್ ಕಡೆಗೆ ಹಾರಾಟ ನಡೆಸಿದ್ದಾರೆ. ಆನಂತರ, 90 ನಿಮಿಷಗಳ ನಂತರ ಇನ್ನೊಂದು ವಿಮಾನದ ಮೂಲಕ ಹೈದಾರಬಾದ್‍ಗೆ ಪ್ರಯಾಣ ಬೆಳೆಸಿದರು ಎಂಬುದಾಗಿ ತಿಳಿದು ಬಂದಿದೆ.
ಈ ಸಂಬಂಧ ರಾಜ್ಯಪಾಲರ ಕಚೇರಿಯಿಂದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಮತ್ತು ಏರ್ ಏಷ್ಯಾಗೆ ಪತ್ರ ಬರೆದಿದೆ. ಹೈದರಾಬಾದ್‍ಗೆ ಪ್ರಯಾಣ ಬೆಳೆಸುವ ಉದ್ದೇಶದಿಂದ ರಾಜ್ಯಪಾಲರು 15 ನಿಮಿಷಗಳ ಮೊದಲು ವಿಮಾನ ನಿಲ್ದಾಣವನ್ನು ತಲುಪಿದ್ದಾರೆ. ಆದರೂ ಅಧಿಕಾರಿಗಳು ಅವರಿಗೆ ವಿಮಾನ ಹತ್ತಲು ಅನುಮತಿ ನೀಡಿಲ್ಲ. ಇದು ನಿಯಮ ಉಲ್ಲಂಘನೆಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕ್ಷಮೆ ಕೋರಿರುವ ಏರ್‍ಲೈನ್‍ಸಂಸ್ಥೆ: ಘಟನೆ ಸಂಬಂಧಿಸಿದಂತೆ ರಾಜ್ಯಪಾಲರ ಪ್ರೊಟೋಕಾಲ್ ಅಧಿಕಾರಿ ಎಂ. ವೇಣುಗೋಪಾಲ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಶಿಷ್ಟಾಚಾರದ ಉಲ್ಲಂಘನೆಗೆ ಸಂಬಂಧಿಸಿದಂತೆ ಏರ್ ಏಷ್ಯಾ ವಿಮಾನ ಸಂಸ್ಥೆ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ರಾಜ್ಯಪಾಲರನ್ನು ಬಿಟ್ಟು ವಿಮಾನ ಟೇಕ್ ಆಫ್ ಆಗಲು ಕಾರಣವೇನು? ಎಂಬ ವಿವರವನ್ನು ಕೇಳಿದ್ದಾರೆ. ಮತ್ತೊಂದೆಡೆ ಘಟನೆಗೆ ಸಂಬಂಧಿಸಿದಂತೆ ಏರ್‍ಲೈನ್ ಸಂಸ್ಥೆ ಕ್ಷಮೆ ಕೋರಿದೆ ಎಂದು ಮೂಲಗಳು ಹೇಳಿವೆ.