ಬಿಜೆಪಿ ಪ್ರಾಯೋಜಿತ ಗುತ್ತಿಗೆದಾರಿಂದ ಮಾತ್ರ ಕಮಿಷನ್ ಆರೋಪ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: "ನಮ್ಮ ಸರ್ಕಾರದ ಸಚಿವರು ಶಾಸಕರು ಲಂಚ ಕೇಳಿಲ್ಲ ಎಂದು ಕೇವಲ ಕೆಂಪಣ್ಣ ಮಾತ್ರವಲ್ಲ, ಇತರೆ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಕೇವಲ ಬಿಜೆಪಿ ಪ್ರಾಯೋಜಿತ ಗುತ್ತಿಗೆದಾರರು ಮಾತ್ರ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡುತ್ತಿದ್ದಾರೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳು 'ಕಮಿಷನ್ ಕೇಳಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ' ಎಂಬ ಹೇಳಿಕೆ ಬಗ್ಗೆ ಶನಿವಾರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ನಾವು ರಾಜ್ಯದ ಜನರಿಗೆ ದಕ್ಷ, ಭ್ರಷ್ಟಾಚಾರರಹಿತ ಆಡಳಿತ ನೀಡುವ ವಚನ ನೀಡಿ ಅಧಿಕಾರಕ್ಕೆ ಬಂದಿದ್ದು, ಪಾರದರ್ಶಕವಾಗಿ ಆಡಳಿತ ಮಾಡಲು ಬದ್ಧರಾಗಿದ್ದೇವೆ. ಕರ್ನಾಟಕವನ್ನು ದಕ್ಷ ಆಡಳಿತ ರಾಜ್ಯವಾಗಿ ಮಾಡುವುದು ನಮ್ಮ ಕನಸು. ಇದಕ್ಕಾಗಿ ಜನ ನಮಗೆ ಆಶೀರ್ವಾದ ಮಾಡಿದ್ದಾರೆʼʼ ಎಂದು ಹೇಳಿದರು.
ʼʼನಾನು, ಸಿದ್ದರಾಮಯ್ಯ ಅವರು ನಮ್ಮದೇ ಆದ ರಾಜಕೀಯ ಹಿನ್ನೆಲೆ ಹೊಂದಿದ್ದೇವೆ. ಕೆಂಪಣ್ಣ ಅವರು ಬಹಳ ಹಿರಿಯ ಹಾಗೂ ಗೌರವಾನ್ವಿತ ವ್ಯಕ್ತಿ. ಅವರು ಬಹಳ ಜವಾಬ್ದಾರಿ ಹೊಂದಿದ್ದಾರೆ. ಅವರು ಬಿಜೆಪಿ ಸರ್ಕಾರ ಬಾಕಿ ಉಳಿಸಿರುವ ಬಿಲ್ ಪಾವತಿ ಬಗ್ಗೆ ಮನವಿ ಮಾಡಲು ನನ್ನನ್ನು ಭೇಟಿ ಮಾಡಿದ್ದರು. ಬಿಜೆಪಿ ಸರ್ಕಾರ ಯಾಕೆ ಬಿಲ್ ಪಾವತಿ ಮಾಡಲಿಲ್ಲ ಎಂಬುದು ನನ್ನ ಪ್ರಶ್ನೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʼʼಈಗ ನಮ್ಮ ಮುಖ್ಯಮಂತ್ರಿಗಳ ನಿರ್ದೇಶನದಂತೆ ಕಾಮಗಾರಿಗಳ ತನಿಖೆ ಮಾಡಿ ಪ್ರಾಮಾಣಿಕವಾಗಿ ಕೆಲಸ ಮಾಡಿರುವವರಿಗೆ ಬಿಲ್ ಪಾವತಿ ಮಾಡಲಾಗುವುದು. ಯಾವುದೇ ಗುತ್ತಿಗೆದಾರರಿಗೆ ಕಿರುಕುಳ ನೀಡುವುದು ನಮ್ಮ ಉದ್ದೇಶವಲ್ಲʼʼ ಎಂದು ಸ್ಪಷ್ಟಪಡಿಸಿದರು.
ʼʼಕೆಂಪಣ್ಣ ಮಾತ್ರ ಅಲ್ಲ, ಇತರೆ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಸರ್ಕಾರದ ಯಾವುದೇ ಸಚಿವರು ಲಂಚ ಕೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಈ ವಿಚಾರ ರಾಜಕೀಯ ಮಾಡಿ, ಗುತ್ತಿಗೆದಾರರನ್ನು ಬಳಸಿಕೊಂಡು ಅಶೋಕ್, ಅಶ್ವತ್ ನಾರಾಯಣ, ಗೋಪಾಲಯ್ಯ ಅವರು ತಮ್ಮ ತಿಮಿಂಗಳಗಳ ರಕ್ಷಣೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಪ್ರಾಯೋಜಿತ ಗುತ್ತಿಗೆದಾರರು ಮಾತ್ರ ಈ ಆರೋಪ ಮಾಡುತ್ತಿದ್ದಾರೆ." ಎಂದು ದೂರಿದರು.