ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ ಆಸ್ತಿ ಕಬಳಿಸಲು ಯತ್ನ: ಎಫ್‍ಐಆರ್ ದಾಖಲು
ಮಡಿಕೇರಿ ನ.17 : ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ ಆಸ್ತಿ ಕಬಳಿಸಲು ಹುನ್ನಾರ ನಡೆಸಿದ ಆರೋಪದಡಿಯಲ್ಲಿ ವ್ಯಕ್ತಿಯೊಬ್ಬರ ವಿರುದ್ದ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ತಹಶೀಲ್ದಾರ್ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಮಡಿಕೇರಿ ತಾಲೂಕು ನಿವಾಸಿ ಹೆಚ್.ಎ. ಮುತ್ತಪ್ಪ ಎಂಬವರ ವಿರುದ್ದ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಆರೋಪಿ ಹೆಚ್.ಎ. ಮುತ್ತಪ್ಪ ಅವರ ತಂದೆ ಅಪ್ಪಯ್ಯ ಎಂಬವರು 1971ರಲ್ಲಿ ಮತ್ತು ತಾಯಿ ಮಾಯಮ್ಮ ಎಂಬವರು 2016ರಲ್ಲಿ ಮೃತಪಟ್ಟಿದ್ದರು. ಈ ನಡುವೆ ಮುತ್ತಪ್ಪ ಅವರು ಮೃತರ ಹೆಸರಲ್ಲಿ ನಕಲಿ ಮರಣ ಪತ್ರ ಸೃಷ್ಟಿಸಿದ್ದಲ್ಲದೇ, ಅದನ್ನು ದೃಢಪಡಿಸಲು ಮಡಿಕೇರಿ ತಹಶೀಲ್ದಾರ್ ಅವರ ಸಹಿಯನ್ನೇ ನಕಲು ಮಾಡಿದ್ದರು ಎನ್ನುವ ಆರೋಪವಿದೆ.
ಈ ಕುರಿತು ಮುತ್ತಪ್ಪ ಅವರ ವಿರುದ್ದ ಚಂಗಪ್ಪ ಎಂಬುವವರು ತಹಶೀಲ್ದಾರ್ ಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಇದರನ್ವಯ ಮಡಿಕೇರಿ ತಹಶೀಲ್ದಾರ್ ಪ್ರವೀಣ್ ಅವರು ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿ ಮುತ್ತಪ್ಪ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.