×
Ad

ಪಾಕ್ ಪರ ಘೋಷಣೆ ಆರೋಪ: ಅಪರಿಚಿತ ವ್ಯಕ್ತಿಯ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲು

Update: 2024-02-28 20:55 IST

ಬೆಂಗಳೂರು : ವಿಧಾನಸೌಧದಲ್ಲಿ ರಾಜ್ಯಸಭೆಯ ಚುನಾವಣೆಯ ಗೆಲುವಿನ ಸಂಭ್ರಮದ ವೇಳೆ ವಿಜೇತ ಅಭ್ಯರ್ಥಿ ಸೈಯದ್ ನಾಸಿರ್ ಹುಸೇನ್ ಬೆಂಬಲಿಗರು ಎನ್ನಲಾದ ವ್ಯಕ್ತಿಯೊಬ್ಬರು ಪಾಕ್ ಪರ ಘೋಷಣೆ ಕೂಗಿದ್ದಾರೆಂಬ ಆರೋಪದ ಮೇಲೆ ಅಪರಿಚಿತ ವ್ಯಕ್ತಿಯ ವಿರುದ್ಧ ಇಲ್ಲಿನ ವಿಧಾನಸೌಧ ಠಾಣೆಯ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿರುವುದಾಗಿ ವರದಿಯಾಗಿದೆ.

ವಿಧಾನಸೌಧ ಭದ್ರತಾ ವಿಭಾಗದ ಎಸಿಪಿ ಶಿವಕುಮಾರ್ ಅವರು ನೀಡಿದ ದೂರಿನನ್ವಯ ಐಪಿಸಿ ಸೆಕ್ಷನ್ 505(1)(ಬಿ), 153ಬಿ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಿಧಾನಸೌಧ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ದಾಖಲಿಸಿದ ಡಾ.ನಾಸೀರ್ ಹುಸೇನ್ ಅವರ ಬೆಂಬಲಿಗರು ವಿಜಯೋತ್ಸವ ಆಚರಿಸುವ ಸಂದರ್ಭದಲ್ಲಿ ಸಂಜೆ 6ರಿಂದ 6:30ರ ಸುಮಾರಿಗೆ ಯಾರೋ ಒಬ್ಬ ವ್ಯಕ್ತಿ ವಿಧಾನಸೌಧದ ಪೂರ್ವ ದ್ವಾರದ ಬಳಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ ಎಂಬ ಸುದ್ದಿ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಈ ಸಂಬಂಧ ಲಭ್ಯವಿರುವ ಫೂಟೇಜ್‍ಗಳನ್ನು ಸಂಗ್ರಹಿಸಿ ಆರೋಪಿಗಳನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತನಿಖೆಗೆ 3 ವಿಶೇಷ ತಂಡ ರಚನೆ: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎನ್ನುವ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ತಿಳಿಸಿದ್ದಾರೆ.

ಒಂದು ತಂಡ ತಾಂತ್ರಿಕ ಮಾಹಿತಿ ಆಧರಿಸಿ ಪತ್ತೆ ಕಾರ್ಯದಲ್ಲಿ ತೊಡಗಿದೆ. ಮತ್ತೊಂದು ತಂಡ ವಿಧಾನಸೌಧಕ್ಕೆ ಸೈಯದ್ ನಾಸೀರ್ ಹುಸೇನ್ ಜತೆಗೆ ಬಂದವರ ಮಾಹಿತಿ ಸಂಗ್ರಹಿಸುತ್ತಿದೆ. ಇನ್ನೊಂದು ಘಟನೆಯ ವಿಡಿಯೋ ಪರಿಶೀಲಿಸಿ ಅಪರಿಚಿತ ಆರೋಪಿಯ ಪತ್ತೆಗೆ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದ್ದಾರೆ.

ಘಟನೆ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿರುವ ರಾಜಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್, ‘ಆ ರೀತಿ ಘೋಷಣೆ ಕೂಗಿಲ್ಲ. ಒಂದು ವೇಳೆ ಕೂಗಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ. ನಾನು ಅಲ್ಲಿದ್ದ ವೇಳೆ ನನಗೆ ಕೇಳಿಸಿಲ್ಲ. ಆ ರೀತಿ ಘೋಷಣೆ ಕೂಗಿದ್ದಲ್ಲಿ ಕ್ರಮ ಕೈಗೊಳ್ಳಬಹುದು’ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News